ಖಾಸಗಿ ಕೈಗೆ ವಿದ್ಯುತ್ ಜನಸಾಮಾನ್ಯರ ಗತಿಯೇನು?

Update: 2022-08-16 06:27 GMT

ವಿದ್ಯುತ್ ವಿತರಣೆ ಖಾಸಗಿಯವರ ಕೈಗೆ ಸಂಪೂರ್ಣವಾಗಿ ಹೋದಾಗ ವಿದ್ಯುತ್ ದರದ ಮೇಲೆ ಸರಕಾರಕ್ಕೆ ಯಾವ ನಿಯಂತ್ರಣವೂ ಇರುವುದಿಲ್ಲ. ಖಾಸಗಿಯವರ ಕೈಗೆ ಹೋದಾಗ ಪ್ರಿ ಪೇಯ್ಡಿ ವ್ಯವಸ್ಥೆ, ಜೊತೆಗೆ ದಿನದ ಹೊತ್ತನ್ನು ಆಧರಿಸಿ ಬಿಲ್ಲಿಂಗ್ ಮೊದಲಾದ ಹೊಸ ಬದಲಾವಣೆಗೆ ಗ್ರಾಹಕ ತಲೆಯೊಡ್ಡಬೇಕಾಗುತ್ತದೆ. ಖಾಸಗಿ ಡಿಸ್ಕಾಂಗಳು ದುಡ್ಡು ಬಾಚಿಕೊಳ್ಳುವುದರಲ್ಲಿ ಸಂಪೂರ್ಣ ನಿರತವಾಗಿಬಿಡುತ್ತವೆ. ಅವಲೋಕನ

ಎಲ್ಲವನ್ನೂ ಖಾಸಗಿಯವರ ಕೈಗೆ ಕೊಡಲು ಹೊರಟಿರುವ ಕೇಂದ್ರ ಸರಕಾರ ಈಗ ವಿದ್ಯುತ್ ಕ್ಷೇತ್ರವನ್ನೂ ಖಾಸಗೀಕರಣಗೊಳಿಸುವ ಇರಾದೆಯಲ್ಲಿ ಹೆಜ್ಜೆಯಿಟ್ಟಾಗಿದೆ. ವಿದ್ಯುತ್ ತಿದ್ದುಪಡಿ ವಿಧೇಯಕವನ್ನು ಮೊನ್ನೆಯ ಅಧಿವೇಶನದಲ್ಲಿ ಅದು ಮಂಡಿಸಿದೆ. ಈ ವಿಧೇಯಕವೇನಾದರೂ ಕಾನೂನಾದರೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ ಎಂಬ ಆತಂಕ ವ್ಯಕ್ತವಾಗತೊಡಗಿದೆ. ದೇಶದ ಜನರ ಪಾಲಿಗೆ ಏನನ್ನು ಉಳಿಸಲಿದೆ ಈ ಸರಕಾರ ಎಂಬ ಘೋರ ದಿಗಿಲು ಕಾಡುವಂತಾಗಿದೆ. ಹಾಗಾದರೆ ಏನು ಈ ವಿಧೇಯಕದ ಮರ್ಮ? ಇದು ಹೊಸ ಪಟ್ಟೇನೂ ಅಲ್ಲ. ಬಹಳ ಕಾಲದಿಂದ ಇದಕ್ಕೆ ತಯಾರಿ ಮಾಡಿಕೊಂಡೇ ಬಂದಿದೆ ಕೇಂದ್ರದಲ್ಲಿನ ಮೋದಿ ನೇತೃತ್ವದ ಸರಕಾರ. 2014ರಿಂದಲೇ ಇಂತಹದ್ದೊಂದು ತಯಾರಿ ಶುರುವಾಗಿತ್ತು ಎಂಬುದು ಕೂಡ ಗುಟ್ಟಿನ ವಿಚಾರವೇನಲ್ಲ. ಆದರೆ ಸಮಯ ನೋಡಿಕೊಂಡೇ ಜೇನುಗೂಡಿಗೆ ಕಲ್ಲೆಸೆಯುವ ಆಟದಲ್ಲಿ ಪಳಗಿರುವ ಈ ಸರಕಾರ, ಈಗ ಚುನಾವಣೆ ಎದುರಿಗಿರುವ ಹೊತ್ತನ್ನು ಗಮನದಲ್ಲಿರಿಸಿಕೊಂಡು, ಒಂದೆಡೆ ಪ್ರತಿಪಕ್ಷಗಳ ದಿಕ್ಕು ತಪ್ಪಿಸುತ್ತಲೇ ಇನ್ನೊಂದೆಡೆಯಿಂದ ತಾನಂದುಕೊಂಡದ್ದನ್ನು ಸಾಧಿಸಿಬಿಡುವ ದಾರಿಯನ್ನು ಸುಲಭವಾಗಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ.

ಸಂಸತ್ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ವಿದ್ಯುತ್ ತಿದ್ದುಪಡಿ ವಿಧೇಯಕ-2022ನ್ನು ಮಂಡಿಸಿ, ಬಳಿಕ ಅದನ್ನು ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಕಳಿಸಿಕೊಡಲಾಗಿದೆ. ಈ ವಿಧೇಯಕ ಮಂಡನೆಯಾದ ಬೆನ್ನಲ್ಲೇ ತೀವ್ರ ವಿರೋಧದ ಅಲೆಯೊಂದು ದೇಶಾದ್ಯಂತ ಎದ್ದಿದೆ. ಪಂಜಾಬ್‌ನಂತಹ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ಒಂದೆಡೆಯಾದರೆ ವಿದ್ಯುತ್ ಇಂಜಿನಿಯರ್‌ಗಳೂ ವಿಧೇಯಕದ ವಿರುದ್ಧ ತಮಿಳುನಾಡು, ತೆಲಂಗಾಣ, ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಪಂಜಾಬ್‌ನಲ್ಲಂತೂ ರೈತರು ಈ ವಿಧೇಯಕದ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ, ಶಿರೋಮಣಿ ಅಕಾಲಿ ದಳ, ಕಾಂಗ್ರೆಸ್ ಮೊದಲಾದ ರಾಜಕೀಯ ಪಕ್ಷಗಳೂ ಈ ವಿಧೇಯಕವನ್ನು ತೀವ್ರವಾಗಿ ಟೀಕಿಸಿವೆ. ಇಷ್ಟೆಲ್ಲದರ ಮಧ್ಯೆಯೂ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಈ ವಿಧೇಯಕ ಜನರ ಪರ ಎನ್ನುತ್ತಲೇ ಇದ್ದಾರೆ. ವಿದ್ಯುತ್ ಸಬ್ಸಿಡಿ ನೀಡುವುದಕ್ಕೆ ಈ ವಿಧೇಯಕದಿಂದ ಅಡ್ಡಿಯೇನೂ ಆಗದು ಮತ್ತು ರೈತರಿಗೆ ಯಾವುದೇ ತೊಂದರೆ ಎದುರಾಗದು ಎಂದೆಲ್ಲ ಅವರು ಮೂಗಿಗೆ ತುಪ್ಪಸವರುವ ಕೆಲಸ ಮುಂದುವರಿಸಿದ್ದಾರೆ. ಆದರೆ ವಾಸ್ತವವೇನು ಎಂಬುದು ಹಲವು ಪದರುಗಳಲ್ಲಿ ಅಡಗಿ ಕೂತಿದೆ.

ತುಂಬ ಸರಳವಾಗಿ ಹೇಳಬೇಕೆಂದರೆ, ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ರಹದಾರಿ ತೆರೆಯುವ ವಿಧೇಯಕ ಇದು. ಇದು ಕಾಯ್ದೆಯಾಗಿಬಿಟ್ಟರೆ ನಾವೀಗ ಮೊಬೈಲ್, ಟೆಲಿಫೋನ್, ಇಂಟರ್‌ನೆಟ್ ಸಂಪರ್ಕಕ್ಕಾಗಿ ಹೇಗೆ ನಮಗೆ ಬೇಕೆನ್ನಿಸಿದ ಸೇವೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆಯೋ ಹಾಗೆಯೇ ವಿದ್ಯುತ್ ಪೂರೈಕೆದಾರರನ್ನೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯುತ್ ವಿತರಣಾ ಜಾಲಕ್ಕೆ ವಿತರಣಾ ಪರವಾನಿಗೆದಾರರ ತಾರತಮ್ಯ ರಹಿತ ಮುಕ್ತ ಪ್ರವೇಶವನ್ನು ಸುಲಭಗೊಳಿಸುವುದಕ್ಕಾಗಿ ವಿದ್ಯುತ್ ಕಾಯ್ದೆಯ ಸೆಕ್ಷನ್ 42ಕ್ಕೆ ತಿದ್ದುಪಡಿ ಬಯಸಿರುವ ವಿಧೇಯಕ ಇದಾಗಿದೆ. ಸ್ಪರ್ಧೆಯನ್ನು ಸಕ್ರಿಯಗೊಳಿಸುವುದು, ಸೇವೆಯಲ್ಲಿ ಸುಧಾರಣೆ, ಪರವಾನಿಗೆದಾರರ ವಿತರಣಾ ಸಾಮರ್ಥ್ಯ ವೃದ್ಧಿ, ವಿದ್ಯುತ್ ವಲಯದ ಸುಸ್ಥಿರತೆಯ ಖಾತರಿ ಮೊದಲಾದ ಬಣ್ಣದ ಮಾತುಗಳು ಇದರಲ್ಲಿ ಬರುತ್ತವೆ. ಇದಕ್ಕಾಗಿ ಸೆಕ್ಷನ್ 1ಕ್ಕೆ ತಿದ್ದುಪಡಿ ಪ್ರಸ್ತಾವ ವಿಧೇಯಕದಲ್ಲಿದೆ. ಸರಕಾರಿ ವಲಯದ ವಿದ್ಯುತ್ ಕಂಪೆನಿಗಳ ವಿತರಣಾ ಜಾಲವನ್ನು ಖಾಸಗಿ ಕಂಪೆನಿಗಳು ಬಳಸಿಕೊಳ್ಳಲು ಅವಕಾಶ ಮಾಡಿಕೊಡುವುದಕ್ಕೆ ಸೆಕ್ಷನ್ 14ಕ್ಕೆ ತಿದ್ದುಪಡಿ ತರುವ ಪ್ರಸ್ತಾವವೂ ವಿಧೇಯಕದಲ್ಲಿದೆ. ಅದು ಸ್ಪರ್ಧೆಯನ್ನು ಉತ್ತೇಜಿಸುವಂತಹದ್ದು ಮತ್ತು ದೇಶಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ದಕ್ಷತೆ ಹೆಚ್ಚಿಸುವಂತಹದ್ದು ಎಂದು ಹೇಳಲಾಗಿದೆ.

ಡಿಸ್ಕಾಂಗಳು ಇತರ ಪರವಾನಿಗೆದಾರರ ವಿದ್ಯುತ್ ವಿತರಣಾ ಜಾಲವನ್ನು ಬಳಸುವುದು, ಒಂದೇ ಪೂರೈಕೆ ಪ್ರದೇಶದಲ್ಲಿ ಬಹು ವಿತರಣಾ ಪರವಾನಿಗೆಗಳು, ಕನಿಷ್ಠ ಮತ್ತು ಗರಿಷ್ಠ ದರ ನಿಗದಿ, ಎಲ್ಲ ಪರವಾನಿಗೆಗಳಿಗೆ ಸಾರ್ವತ್ರಿಕ ಸೇವಾ ಬಾಧ್ಯತೆ ಮಾತ್ರವಲ್ಲದೆ, ನವೀಕರಿಸಬಹುದಾದ ಇಂಧನ ಮೂಲಗಳಿಂದಲೂ ವಿದ್ಯುತ್ ಖರೀದಿ ಇವಕ್ಕೆಲ್ಲ ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೆಕ್ಷನ್ 60ರ ಸೇರ್ಪಡೆ ವಿಚಾರವನ್ನೂ ಈ ತಿದ್ದುಪಡಿ ವಿಧೇಯಕ ಹೊಂದಿದೆ.

ಈ ವಿಧೇಯಕದ ಪರವಾಗಿ ಮಾತನಾಡುವವರ ಪ್ರಕಾರ, ಖಾಸಗಿ ವಲಯದ ವಿದ್ಯುತ್ ವಿತರಕ ಕಂಪೆನಿಗಳ ಪ್ರವೇಶವಾಗಿ, ಡಿಸ್ಕಾಂಗಳ ಏಕಸ್ವಾಮ್ಯ ಇಲ್ಲವಾಗಲಿದೆ. ವಿದ್ಯುತ್ ಸೋರಿಕೆಯಂತಹ ಬಹುದೊಡ್ಡ ಸಮಸ್ಯೆಗೆ ಕಡಿವಾಣ ಬೀಳಲಿದೆ. ಆದರೆ ವಿಧೇಯಕ ವಿರೋಧಿಸುವವರು ವಿವರಿಸುವ ವಾಸ್ತವ ಬೇರೆಯೇ ಇದೆ. ದೇಶದಲ್ಲಿನ ಒಟ್ಟು ವಿದ್ಯುತ್‌ನಲ್ಲಿ ಕೃಷಿ ಬಳಕೆಯ ಪಾಲು ಶೇ. 18 ಮಾತ್ರ ಹಾಗೂ ಗೃಹಬಳಕೆಯ ಪಾಲು ಶೇ. 20. ಉಳಿದದ್ದೆಲ್ಲ ಕೈಗಾರಿಕೆ ಮತ್ತು ವಾಣಿಜ್ಯೋದ್ದೇಶಕ್ಕೆ ಬಳಕೆಯಾಗುತ್ತದೆ. ಅಂದರೆ ಶೇ. 62ರಷ್ಟು ವಿದ್ಯುತ್ ಖಾಸಗಿಯವರ ಬಳಕೆಗೇ ಇರುವುದರಿಂದ ಹೊಸ ಕಾನೂನು ಬಂದರೆ ಲಾಭವಾಗುವುದು ಯಾರಿಗೆ ಎಂಬುದು ನಿಚ್ಚಳ. ಇನ್ನು ವಿಧೇಯಕವು ಖಾಸಗಿ ಡಿಸ್ಕಾಂಗಳ ಹಿತ ಬಯಸುವಂತಹದ್ದಾಗಿದ್ದು, ಸರಕಾರಿ ಡಿಸ್ಕಾಂಗಳಿಗೆ ದೊಡ್ಡ ಪೆಟ್ಟು ಕೊಡಲಿದೆ ಎಂಬುದು ಕೂಡ ಮತ್ತೊಂದು ಆತಂಕ. ಹಾಗಾಗಿಯೇ ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ ಈ ವಿಧೇಯಕದ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವುದು. ವಿಧೇಯಕ ಈಗಿರುವ ಸ್ವರೂಪದಲ್ಲಿಯೇ ಕಾಯ್ದೆಯಾದರೆ ಅದು ಸರಕಾರಿ ಡಿಸ್ಕಾಂಗಳು ಭಾರೀ ನಷ್ಟ ಅನುಭವಿಸುವುದಕ್ಕೆ ಕಾರಣವಾಗಲಿದೆ.

ಕ್ರಮೇಣ ಕೆಲವೇ ಕೆಲವು ಖಾಸಗಿ ಡಿಸ್ಕಾಂಗಳು ದೇಶದ ವಿದ್ಯುತ್ ವಲಯದಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕೆ ಅವಕಾಶವಾಗಲಿದೆ ಎಂಬುದು ಪರಿಣಿತರ ಅಭಿಪ್ರಾಯ. ಹಾಗೆಯೇ ರೈತರು ಮತ್ತು ಬಡತನದ ರೇಖೆಯ ಕೆಳಗಿರುವವರಿಗೆ ಉಚಿತ ವಿದ್ಯುತ್ ನಿಧಾನವಾಗಿ ಇಲ್ಲವಾಗಲಿದೆ ಎನ್ನುತ್ತದೆ ಸಂಯುಕ್ತ ಕಿಸಾನ್ ಮೋರ್ಚಾ. ಲಾಭ ಇರುವಲ್ಲಿ ಮಾತ್ರ ಖಾಸಗಿ ಡಿಸ್ಕಾಂಗಳು ಹಣ ಹೂಡುವುದರಿಂದ ಅವರು ನಗರ ಪ್ರದೇಶಗಳ ಮೇಲೆ ಮಾತ್ರ ಕಣ್ಣು ಹಾಕಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಅಭಾವಕ್ಕೆ ಪರಿಹಾರ ಸಿಗಲಾರದು ಎಂಬುದು ಕಿಸಾನ್ ಮೋರ್ಚಾ ವ್ಯಕ್ತಪಡಿಸುತ್ತಿರುವ ಆತಂಕ. ಇದೆಲ್ಲ ಒಂದು ಬಗೆಯದ್ದಾದರೆ, ಒಕ್ಕೂಟ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಮಟ್ಟಿಗೆ ಇದು ಬಾಧಕವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯಗಳೆರಡೂ ಸೇರಿ ನಿಭಾಯಿಸಬೇಕಿದ್ದ ವಿದ್ಯುತ್ ವಲಯದ ವಿಚಾರದಲ್ಲಿ ಕೇಂದ್ರ ಏಕಾಏಕಿ ತೀರ್ಮಾನ ತೆಗೆದುಕೊಳ್ಳಹೊರಟಿರುವುದು ರಾಜ್ಯಗಳ ಹಕ್ಕನ್ನೇ ಕಸಿದುಕೊಂಡಂತೆ ಎನ್ನುತ್ತಾರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಜನವಿರೋಧಿ ಮಸೂದೆಯನ್ನು ಜಾರಿಗೆ ತರಬಾರದೆಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನೇ ನಾಶಪಡಿಸಲು ಕೇಂದ್ರ ನಡೆಸುತ್ತಿರುವ ಯತ್ನ ಎಂದು ಟೀಕಿಸಿರುವ ಅವರು, ರಾಜ್ಯಗಳ ವಿದ್ಯುತ್ ಗ್ರಿಡ್‌ಗಳನ್ನು ರಾಷ್ಟ್ರೀಯ ವಿದ್ಯುತ್ ಗ್ರಿಡ್ ಆಗಿಸುವ ಒಳ ಉದ್ದೇಶ ಈ ವಿಧೇಯಕದ್ದಾಗಿದೆ ಎಂದು ಆರೋಪಿಸಿದ್ದಾರೆ.

ಕೃಷಿ ಕಾಯ್ದೆಗಳ ವಿಚಾರವೂ ಸೇರಿದಂತೆ ಒಕ್ಕೂಟ ಸರಕಾರದ ಈವರೆಗಿನ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುವ ಒಂದು ಮುಖ್ಯ ಸಂಗತಿಯೇನೆಂದರೆ, ಎಲ್ಲವನ್ನೂ ಖಾಸಗಿಯವರ ಪಾಲಾಗಿಸುವ ನಿಟ್ಟಿನಲ್ಲಿ ಅದು ತುದಿಗಾಲ ಮೇಲೆ ನಿಂತಿದೆ ಎಂಬುದು. ಕೃಷಿ ಕಾಯ್ದೆಗಳು ಹೇಗೆ ಕೃಷಿಯನ್ನು ಕಾರ್ಪೊರೇಟ್ ವಲಯದ ಪಾಲಾಗಿಸುವ ಹುನ್ನಾರವನ್ನು ಅಡಕಗೊಳಿಸಿಕೊಂಡಿದ್ದವೊ ಅದೇ ರೀತಿಯಲ್ಲಿ ವಿದ್ಯುತ್ ತಿದ್ದುಪಡಿ ವಿಧೇಯಕವೂ ಸರಕಾರಿ ವಲಯದ ಕಂಪೆನಿಗಳನ್ನು ದುರ್ಬಲಗೊಳಿಸಿ ಖಾಸಗಿಯವರ ಅನಾಯಾಸದ ಪ್ರವೇಶಕ್ಕೆ ಎಡೆ ಮಾಡಿಕೊಡುವ ಇರಾದೆಯದ್ದೇ ಆಗಿದೆ ಮತ್ತು ಕೃಷಿಯನ್ನು ಕಾರ್ಪೊರೇಟ್ ವಲಯದ ಪಾಲಾಗಿಸುವ ಹುನ್ನಾರಕ್ಕೂ ವಿದ್ಯುತ್ ವಲಯವನ್ನು ಖಾಸಗಿಯವರಿಗೆ ಒಪ್ಪಿಸುವ ಇರಾದೆಗೂ ಪರಸ್ಪರ ಸಂಬಂಧ ಕೂಡ ಇದ್ದೇ ಇದೆ. ಇನ್ನೂ ಒಂದು ವಿಷಯವೂ ಇದಕ್ಕೆ ತಳುಕು ಹಾಕಿಕೊಳ್ಳುತ್ತದೆ. ಅದೆಂದರೆ 2030ರ ಹೊತ್ತಿಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನಷ್ಟೇ ಉಳಿಸುವ ದಿಸೆಯಲ್ಲಿನ ಕೇಂದ್ರದ ಯೋಜನೆ.

ಅಷ್ಟು ಹೊತ್ತಿಗೆ ದೇಶದ ಇಡೀ ವಿದ್ಯುತ್ ವಲಯ ಖಾಸಗಿಯವರ ಪಾಲಾಗಿರಲಿದ್ದು, ಅದು ಎಂತಹ ಲಾಭದಾಯಕ ಉದ್ಯಮವಾಗಿ ಕೆಲವೇ ಕೆಲವು ಖಾಸಗಿ ಕಂಪೆನಿಗಳ ಪಾಲಿನ ಅನಾಮತ್ತು ನಿಧಿಯಾಗಲಿದೆ ಎಂಬುದನ್ನು ಊಹಿಸಬಹುದು. ದಿನನಿತ್ಯದ ಬದುಕಿನ ಬಹುದೊಡ್ಡ ಅನಿವಾರ್ಯತೆಯಾದ ವಿದ್ಯುತ್‌ಗಾಗಿ ಹೇಗೆ ಖಾಸಗಿಯವರನ್ನು ಅವಲಂಬಿಸಬೇಕಾಗಿ ಬರಲಿದೆ ಮತ್ತು ವಿದ್ಯುತ್ ಬಳಕೆ ಪ್ರಿ ಪೇಯ್ಡಿ ಆಗಿಬಿಡುವಲ್ಲಿನ ವ್ಯವಸ್ಥೆ ಹೇಗೆ ಎಲ್ಲರ ದೈನಂದಿನ ಕ್ರಮವನ್ನು ಅತಿಕ್ರಮಿಸಲಿದೆ ಎಂಬುದರ ಕಲ್ಪನೆಯೇ ಕರಾಳವಾಗಿ ಕಾಣಿಸುತ್ತದೆ. ಮಮತಾ ಬ್ಯಾನರ್ಜಿ ಅವರು ಆರೋಪಿಸುವಂತೆ ರಾಜ್ಯಗಳ ವಿದ್ಯುತ್ ಗ್ರಿಡ್‌ಗಳು ರಾಷ್ಟ್ರೀಯ ಗ್ರಿಡ್‌ಗಳಾಗಿ, ರಾಜ್ಯಗಳು ತಮ್ಮ ಅಧಿಕಾರದ ವ್ಯಾಪ್ತಿ ಮತ್ತು ಹಕ್ಕನ್ನೇ ಕಳೆದುಕೊಳ್ಳಲಿವೆ. ತಮ್ಮ ಆದಾಯದ ಮೂಲವಾಗಿ ಆಗ ರಾಜ್ಯಗಳು ಜಿಎಸ್‌ಟಿಯೊಂದನ್ನೇ ನೆಚ್ಚಬೇಕಾಗಿ ಬರುವುದು, ಅದನ್ನು ಕೊಡಲು ಕೇಂದ್ರವು ಜನರ ತೆರಿಗೆಯ ದುಡ್ಡಿಂದಲೇ ಎತ್ತುವುದರಿಂದ ಅಂತಿಮವಾಗಿ ಅದರ ಹೊರೆಯೂ ದೇಶದ ಜನತೆಯ ಮೇಲೆಯೇ ಬೀಳುವುದು ತಪ್ಪಲಾರದು. ಅಂತೂ ಖಾಸಗಿ ದರ್ಬಾರ್ ಒಂದರ ಅಡಿಯಲ್ಲಿ ಜನತೆಯ ದೈನಂದಿನ ಬದುಕಿನ ವಿಚಾರ ಕೂಡ ತನ್ನ ಸ್ವರೂಪ ಬದಲಿಸಿಕೊಳ್ಳಬಹುದಾದ ಅನಿವಾರ್ಯತೆ ತಲೆದೋರುವ ದಿನಗಳು ದೂರವಿದ್ದಂತಿಲ್ಲ. ಇನ್ನೂ ಒಂದು ಆತಂಕವನ್ನು ಪರಿಣತರು ವ್ಯಕ್ತಪಡಿಸುತ್ತಿದ್ದಾರೆ. ಅದೆಂದರೆ, ವಿದ್ಯುತ್ ವಿತರಣೆ ಖಾಸಗಿಯವರ ಕೈಗೆ ಸಂಪೂರ್ಣವಾಗಿ ಹೋದಾಗ ವಿದ್ಯುತ್ ದರದ ಮೇಲೆ ಸರಕಾರಕ್ಕೆ ಯಾವ ನಿಯಂತ್ರಣವೂ ಇರುವುದಿಲ್ಲ ಎಂಬುದು. ಖಾಸಗಿಯವರ ಕೈಗೆ ಹೋದಾಗ ಈಗಾಗಲೇ ಹೇಳಿದಂತೆ ಪ್ರಿ ಪೇಯ್ಡಿ ವ್ಯವಸ್ಥೆ, ಜೊತೆಗೆ ದಿನದ ಹೊತ್ತನ್ನು ಆಧರಿಸಿ ಬಿಲ್ಲಿಂಗ್ ಮೊದಲಾದ ಹೊಸ ಬದಲಾವಣೆಗೆ ಗ್ರಾಹಕ ತಲೆಯೊಡ್ಡಬೇಕಾಗುತ್ತದೆ. ಖಾಸಗಿ ಡಿಸ್ಕಾಂಗಳು ದುಡ್ಡು ಬಾಚಿಕೊಳ್ಳುವುದರಲ್ಲಿ ಸಂಪೂರ್ಣ ನಿರತವಾಗಿಬಿಡುತ್ತವೆ.

ಈಗಾಗಲೇ ದೇಶದ ವಿದ್ಯುತ್ ವಲಯದ ಅರ್ಧಕ್ಕಿಂತಲೂ ಹೆಚ್ಚಿನ ಪಾಲಿನ ಮೇಲೆ ಖಾಸಗಿಯವರ ಹಿಡಿತವೇ ಇದೆ. ಸ್ಥಿತಿ ಹೀಗಿರುವಾಗ 2030ರ ಹೊತ್ತಿಗೆ ಇಡೀ ವಿದ್ಯುತ್ ವಲಯವೇ ಖಾಸಗಿಯವರ ಒಡೆತನಕ್ಕೆ ಸೇರಿಹೋಗಲಿರುವ ಚಿತ್ರ ಹೇಗಿದ್ದೀತು? ಎಲ್ಲವೂ ಖಾಸಗಿಯವರ ನಿಯಂತ್ರಣಕ್ಕೆ ಸೇರಿದಂತಾಗಿರುವ ಸನ್ನಿವೇಶ ಅದಾಗಲಿದೆ. 2014ರಿಂದಲೇ ಮತ್ತೆ ಮತ್ತೆ ಈ ವಿದ್ಯುತ್ ತಿದ್ದುಪಡಿ ವಿಧೇಯಕದ ವಿಚಾರದಲ್ಲಿ ಕಸರತ್ತು ಮಾಡುತ್ತಲೇ ಬಂದಿದ್ದ ಸರಕಾರದ ಎದುರಿನ ಯೋಜನೆಯೇ ಪಕ್ಕಾ ಲೆಕ್ಕಾಚಾರದ್ದಾಗಿದೆ. ಬೇರೆ ಬೇರೆ ಹೊತ್ತಿನ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ನಿಗದಿ ವಿಚಾರವೂ ಸೇರಿದಂತೆ ವಿದ್ಯುತ್ ರಫ್ತಿಗೆ ಉತ್ತೇಜನ ವಿಚಾರದವರೆಗೆ ಪೂರ್ತಿಯಾಗಿ ಖಾಸಗಿಯವರಿಗೆ ಎಲ್ಲದಕ್ಕೂ ಅನುವು ಮಾಡಿಕೊಡುವ ದಿಸೆಯಲ್ಲಿನ ಸಿದ್ಧತೆಯೊಂದು ಕಾಣಿಸುತ್ತದೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸರಕಾರಿ ವಲಯದ ಸಂಸ್ಥೆಗಳನ್ನು ಹೇಗೆ ದುರ್ಬಲಗೊಳಿಸುತ್ತ, ಅವು ನಿಷ್ಪ್ರಯೋಜಕ ಎಂಬ ಭಾವನೆ ಹುಟ್ಟುವಂತೆ ಮಾಡುತ್ತ ಬಂದಿರುವ ಸರಕಾರದ ನಡೆ ಖಾಸಗಿಯವರ ಮುಂದೆ ಮಂಡಿಯೂರಿರುವುದರ ಪರಿಣಾಮವೇ ಆಗಿದೆ.

ಸರಕಾರ ಈ ದೇಶದ ಜನಸಾಮಾನ್ಯನ ಮೇಲೆ, ಈ ದೇಶದ ರೈತನ ಮೇಲೆ ಸವಾರಿ ಮಾಡುತ್ತಲೇ ಬಂದಿದೆ. ಈ ಎರಡೂ ವರ್ಗದ ಬಗ್ಗೆ ಅದಕ್ಕೆ ಕಾಳಜಿಯೇನೂ ಇಲ್ಲವೆಂಬುದು ಹೊಸ ಸಂಗತಿಯಲ್ಲ. ಆದರೆ, ಈಗ ವಿದ್ಯುತ್ ವಿತರಣಾ ಪರವಾನಿಗೆಗಳನ್ನು ಹೆಚ್ಚಿಸುವ ಮೂಲಕ ದಕ್ಷತೆ ವೃದ್ಧಿಸುತ್ತೇವೆಂದು ಹೊರಟಿರುವ ಸರಕಾರ ಇದೇ ಜನಸಾಮಾನ್ಯರ ಪಾಲಿಗೆ ಮುಳುವಾದೀತೆಂಬುದರ ಬಗ್ಗೆಯೂ ಪರಿಣತರು ಎಚ್ಚರಿಸುತ್ತಾರೆ. ಎಷ್ಟೇ ಪರವಾನಿಗೆ ಹೆಚ್ಚಿಸಿದರೂ ಸೇವಾ ಗುಣಮಟ್ಟ ಮತ್ತು ದರದಲ್ಲಿ ಅಂತಹ ಹೇಳಿಕೊಳ್ಳುವ ಯಾವ ಮಹತ್ತರ ಸಾಧನೆಯೂ ಆಗದೆಂಬುದು ಅವರ ಅಭಿಪ್ರಾಯ. ವಿದ್ಯುತ್ ಖರೀದಿ ವೆಚ್ಚ ಎಲ್ಲ ಪರವಾನಿಗೆದಾರರಿಗೂ ಒಂದೇ ತೆರನಾಗಿರುವುದರಿಂದ ಯಾರೂ ಜನಸಾಮಾನ್ಯರಿಗಾಗಿ ಮಹತ್ತರವಾದುದೇನನ್ನೋ ಮಾಡಲು ಮುಂದಾಗಲಾರರು. ಬದಲಾಗಿ ವಿತರಕರ ಮೇಲಿನ ಹೊರೆಯನ್ನೆಲ್ಲ ಸಾಮಾನ್ಯ ಗ್ರಾಹಕನೂ ಅನುಭವಿಸಬೇಕಾಗುತ್ತದೆ. ಇನ್ನೂ ದಿಗಿಲಿನ ವಿಚಾರವೇನೆಂದರೆ, ಈ ಖಾಸಗಿ ಕಂಪೆನಿಗಳೇನಾದರೂ ವಿಫಲವಾದಲ್ಲಿ ಇನ್ನಷ್ಟು ಏಟು ತಿನ್ನುವವನು ಕೂಡ ಇದೇ ಸಾಮಾನ್ಯ ಗ್ರಾಹಕನೇ ಆಗಿರುತ್ತಾನೆ. ಸುಧಾರಣೆಯ ಬಣ್ಣ ಕೊಟ್ಟು ಸರಕಾರ ಹೇಳುತ್ತಿರುವ ಮಾತು, ತರಲು ಹೊರಟಿರುವ ಕಾಯ್ದೆ ಈ ದೇಶದ ಜನತೆಯ ಪಾಲಿಗೆ ಮತ್ತೊಂದು ದುರ್ಬರವನ್ನು ಮಾತ್ರ ತಂದಿಡಲಿದೆ ಎಂಬುದು ಸುಳ್ಳಲ್ಲ. ಅದು ಎಷ್ಟು ತಡವಾದೀತೋ ಅಷ್ಟು ದಿನಗಳಷ್ಟೇ ಜನಸಾಮಾನ್ಯರ ಬದುಕು ಕೊಂಚ ಮಟ್ಟಿಗಾದರೂ ಸುರಳಿತ ಎಂದುಕೊಳ್ಳಬೇಕಷ್ಟೆ.

Writer - ಆರ್. ಜೀವಿ

contributor

Editor - ಆರ್. ಜೀವಿ

contributor

Similar News