ಗುರುಪುರ ಗ್ರಾಪಂ ಕಾರ್ಯಕ್ರಮದಲ್ಲಿ ಸಾವರ್ಕರ್ ಭಾವಚಿತ್ರ ಪ್ರದರ್ಶನವನ್ನು ಆಕ್ಷೇಪಿಸಿದವರ ವಿರುದ್ಧ ಪ್ರಕರಣ ದಾಖಲು

Update: 2022-08-16 10:01 GMT

ಬಜ್ಪೆ, ಆ.16:‌ ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾವರ್ಕರ್ (Savarkar) ಭಾವಚಿತ್ರ ಪ್ರದರ್ಶಿಸಿದ್ದನ್ನು ಆಕ್ಷೇಪಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹಲವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕರ್ ನೀಡಿರುವ ದೂರಿನಂತೆ ಸ್ಥಳೀಯರಾದ ಎ.ಕೆ.ರಿಯಾಝ್, ಮನ್ಸೂರ್, ಅಶ್ರಫ್, ಶಾಹಿಕ್ ಮೊದಲಾದವರ ಮೇಲೆ‌‌ ಪ್ರಕರಣ‌ ದಾಖಲಾಗಿದೆ. 

ಇದನ್ನೂ ಓದಿ: ತುಮಕೂರು: ಸಾವರ್ಕರ್ ಭಾವಚಿತ್ರ ಇರುವ ಬ್ಯಾನರ್ ಗೆ ಹಾನಿ

ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ವೇಳೆ ಸ್ಥಳೀಯ ಬೆಥನಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದರು. ಈ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಜೊತೆ ಸಾವರ್ಕರ್ ಭಾವಚಿತ್ರ ಪ್ರದರ್ಶಿಸಿದ್ದು, ಇದಕ್ಕೆ ಪ್ರೇಕ್ಷಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೋಪಿಗಳು ಆಕ್ಷೇಪಿಸಿದ್ದಾರೆ. ಬಳಿಕ ಶಾಲೆಯ ಮುಖ್ಯೋಪಾಧ್ಯಾಯರ ಜೊತೆ ಮಾತಿನ ಚಕಮಕಿ ನಡೆಸಿ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ. ಆ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪಿಡಿಒ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News