ದೇರೆಬೈಲ್ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟ ಜಮೀನು ವಿತರಣೆಗೆ ಒತ್ತಾಯ

Update: 2022-08-16 10:27 GMT

ಮಂಗಳೂರು, ಆ.16: ನಗರದ ದೇರೆಬೈಲ್ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮೀಸಲಿಸಿರುವ ಡಿಸಿ ಮನ್ನಾ ಭೂಮಿಯನ್ನು ಸಮುದಾಯದ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಅಭಿವೃದ್ಧಿ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿರುವ ಸಂಘದ ಗೌರವಾಧ್ಯಕ್ಷ ಎ.ಚಂದ್ರ ಕುಮಾರ್, ಮಂಗಳೂರು ತಾಲೂಕಿನ ದೇರೆಬೈಲ್ ಗ್ರಾಮದ ಸರ್ವೇ ನಂ. 174 9ಎ, 175, 176 ಭೂಮಿ ಇತರ ಮೂಲಕ ದಾಖಲೆಯ ಪ್ರಕಾರ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮೀಸಲಿರಿಸಿದೆ. ಈ ಜಮೀನು ಡಿ.ಸಿ. ಮನ್ನಾ ಭೂಮಿಯಾಗಿದೆ. ಜಮೀನನ್ನು ಮೂಲ ದಾಖಲೆಯಿಂದ ಹೊಸತಾಗಿ ಪಹಣಿಯಲ್ಲಿ ದಾಖಲೆ ಮಾಡುವಾಗ ಸರಕಾರಿ ಜಮೀನು ಎಂದು ದಾಖಲಿಸಲಾಗಿದೆ. ಇದರಿಂದ ದಲಿತ ಕುಟುಂಬಗಳಿಗೆ ಅನ್ಯಾಯವಾಗಿದೆ. ಇಲ್ಲಿ ಇತರರಿಗೆ ವಾಸಿಸಲು ಅನುವು ಮಾಡಿಕೊಡಲಾಗಿದ. ಇನ್ನೊಂದು ಕಡೆ ಅರಣ್ಯ ಇಲಾಖೆಯವರು ಡಿಸಿ ಮನ್ನಾ ಭೂಮಿಯಲ್ಲಿ ಸಾವಿರಾರು ಎಕರೆ ಆಕ್ರಮಿಸಿ ಅಕೇಶಿಯಾ ಗಿಡವನ್ನು ನೆಟ್ಟಿದ್ದಾರೆ. ಹಾಗಾಗಿ ಆ ಜಮೀನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಿ ಪರಿಶಿಷ್ಟರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

1957ರಲ್ಲಿ ಪರಿಶಿಷ್ಟ ಕುಟುಂಬಗಳಿಗೆ ಈ ದರ್ಖಾಸು ಜಮೀನು ನೀಡಲಾಗಿದ್ದು, ಮೂಲ ದರ್ಖಾಸುದಾರರು ಮೃತರಾಗಿ ಅವರ ಮಕ್ಕಳ ಅಥವಾ ಅವಲಂಬಿತರಿಗೆ ಇನ್ನೂ ಕೂಡಾ ಹಕ್ಕು ಪರಿವರ್ತನೆಯಾಗಿಲ್ಲ. ಕುಟುಂಬದ ಸದಸ್ಯರು ಅವಿದ್ಯಾವಂತರಾಗಿರುವ ಕಾರಣ ಹಿರಿಯರು ಮೃತರಾದ ಸಂದರ್ಭ ಭೂಮಿಯನ್ನು ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡದೆ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಂದಾಯ ಇಲಾಖೆ ನೇರವಾಗಿ ಜನ ಸಂಪರ್ಕದ ಮೂಲಕ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಬೇಕು ಎಂದು ಚಂದ್ರ ಕುಮಾರ್ ಒತ್ತಾಯಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪರಿಶಿಷ್ಟ ಕುಟುಂಬಗಳಿಗೆ ಸರಕಾರ ಮೀಸಲಿರಿಸಿದ ಶೇ.24.10 ನಿಧಿಯಲ್ಲಿ ಮನೆ ನಿರ್ಮಾಣಕ್ಕೆ ಕಾನೂನು ತೊಂದರೆಯಾಗಿದ್ದು, ಅದನ್ನು ಸರಳೀಕರಿಸಬೇಕು. ಸಹಾಯನಿಧಿ ಹಾಗೂ ಮನೆ ದುರಸ್ತ ನಿಧಿ ಹೆಚ್ಚಿಸಬೇಕು. ಈ ನಿಧಿಯಿಂದ ಪರಿಶಿಷ್ಟ ಕುಟುಂಬಗಳ ಬಿಇ, ಎಂಬಿಬಿಎಸ್, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದ್ದು, ಇದನ್ನು ಪದವೀಧರ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಚಂದ್ರಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸುರೇಂದ್ರ ಸುಂಕದಕಟ್ಟೆ, ಚಂದ್ರಹಾಸ ಕೋಡಿಕ್ಕಲ್, ಜತೆ ಕಾರ್ಯದರ್ಶಿ ರಾಮಚಂದ್ರ ಬಾಬೂಜಿ ನಗರ, ಕೋಶಾಧಿಕಾರಿ ರಾಮಕೃಷ್ಣ, ಕಮಲಾಕ್ಷ, ಪ್ರಸನ್ನ, ವೇಣುಗೋಪಾಲ, ಚಂದ್ರಹಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News