ʼಕಮ್ಯೂನಿಟಿ ಸೆಂಟರ್ʼ ಸಮಾಜವನ್ನು ತಳಮಟ್ಟದಿಂದ ಮೇಲೆತ್ತುವ ವ್ಯವಸ್ಥಿತ, ಪರಿಣಾಮಕಾರಿ ಆಂದೋಲನವಾಗಿದೆ: ಮಹಮ್ಮದ್ ನಝೀರ್

Update: 2022-08-16 14:17 GMT

ಪುತ್ತೂರು, ಆ.16: ʼಕಮ್ಯೂನಿಟಿ ಸೆಂಟರ್ʼ ಸಮಾಜವನ್ನು ತಳಮಟ್ಟದಿಂದ ಮೇಲೆತ್ತುವ ವ್ಯವಸ್ಥಿತ ಮತ್ತು ಪರಿಣಾಮಕಾರಿ ಆಂದೋಲನವಾಗಿದೆ. ಇದರ ಆಲೋಚನೆ, ಯೋಜನೆ ಮತ್ತು ಪದ್ಧತಿಗಳ ಫಲಿತಾಂಶ ಐದು ವರ್ಷದ ನಂತರ ನಮಗೆ ಅರಿವಾಗಲಿದೆ ಎಂದು ಕರ್ನಾಟಕ ಮೈನಾರಿಟಿ ಡೆವಲಪ್‌ಮೆಂಟ್ ಕಾರ್ಪೊರೇಶನ್ ನ ವ್ಯವಸ್ಥಾಪಕ ನಿರ್ದೇಶಕರಾದ KAS ಅಧಿಕಾರಿ ಮಹಮ್ಮದ್ ನಝೀರ್ ಅಭಿಪ್ರಾಯ ಪಟ್ಟರು.

ಅವರು ಕಮ್ಯುನಿಟಿ ಸೆಂಟರ್ ಮೂಲಕ ನಡೆದ ಇನ್‌ಸ್ಪೇರ್ ಯುವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ, ಪುತ್ತೂರಿನಲ್ಲಿ ಆರಂಭವಾದ ಈ ಚಳವಳಿ ರಾಜ್ಯದಾದ್ಯಂತ ಪಸರಿಸಿ ನಾಡಿನ ಪ್ರಗತಿಗೆ ನವ ಪೀಳಿಗೆಯನ್ನು ತರಬೇತುಗೊಳಿಸುವ ಪ್ರಯತ್ನ ನಡೆಯಲಿ ಎಂದು ಶುಭ ಹಾರೈಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯು ನಾಲ್ಕು ಸಾವಿರ ವಿದ್ಯಾರ್ಥಿಗಳನ್ನು ತಲುಪಿ, ಅದರಲ್ಲಿ ಮುನ್ನೂರು ವಿದ್ಯಾರ್ಥಿಗಳಿಗೆ ವಿವಿಧ  ಚಟುವಟಿಕೆ ನೀಡಿ ಅವರ ವ್ಯಕ್ತಿತ್ವ ವಿಕಸನ ಮಾಡಿದ್ದು, ಅವರಲ್ಲಿ ಸಾಮಾಜಿಕ ಕಾಳಜಿ ಮೂಡಿಸಿದ್ದು, ಅವರ ಪ್ರತಿಭೆಗಳನ್ನು ಅನಾವರಣ ಮಾಡಿದ್ದು ಅದ್ಭುತ ವಿಷಯವಾಗಿದೆ ಎಂದ ಅವರು ಇಂದು ಸೆಂಟರಿನ ಅಂತಹ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದು ಹೆಮ್ಮೆ ಎನಿಸಿದೆ ಎಂದರು.

ಡೈಮಂಡ್ ಇಂಟರ್ ನ್ಯಾಶನಲ್ ಕಾಲೇಜಿನ ಮಾಲಕರಾದ ಅಲ್ತಾಫ್ ಮಾತನಾಡುತ್ತಾ, ನಾವು  ಸ್ಪೂರ್ತಿ ಪಡೆಯಲು ಸ್ಪೂರ್ತಿದಾಯಕ ವ್ಯಕ್ತಿತ್ವದ ಜೊತೆ ಸಹವಾಸ ಮತ್ತು ಸಂವಹನ ಮಾಡಬೇಕು, ಕೇವಲ ಒಂದು ವರ್ಷದಲ್ಲಿ ಕಮ್ಯೂನಿಟಿ ಸೆಂಟರ್ ನಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಅಲ್ಲಿನ ಸ್ಪೂರ್ತಿದಾಯಕ ಚಟುವಟಿಕೆಗಳೇ ಕಾರಣವಾಗಿದೆ ಹಾಗಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿದ ಸೆಂಟರಿನ ಯೋಜನೆಗಳನ್ನು ನಾವು ಎಲ್ಲಾ ಕಡೆಯಲ್ಲೂ ಮಾದರಿಯಾಗಿಸಿ ದುಡಿಯಬೇಕು ಎಂದು ಹೇಳಿದರು.

ʼವಾರ್ತಾಭಾರತಿʼ ವರದಿಗಾರರಾದ ಸಂಶುದ್ದೀನ್ ಮಾತನಾಡುತ್ತಾ, ಆಕ್ರಂದನದ ಮೂಲಕ ಕರಾವಳಿಯಲ್ಲಿ ಸಾಮಾಜಿಕ ಕ್ರಾಂತಿ ಉಂಟಾಗಿತ್ತು, ಈಗ ಕಮ್ಯೂನಿಟಿ ಸೆಂಟರ್ ಮೂಲಕ ಶೈಕ್ಷಣಿಕ ಆಂದೋಲನಕ್ಕೆ ಸರಿಯಾದ ಪದ್ಧತಿ ಸಿಕ್ಕಿದೆ. ವಿಶೇಷತೆ ಏನೆಂದರೆ ಈ ಎರಡರ ರುವಾರಿ ಹನೀಫ್ ಪುತ್ತೂರು ಮತ್ತು ಅವರ ತಂಡ  ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಈ ತಂಡದ ವ್ಯಕ್ತಿತ್ವಗಳು ತಮ್ಮ ಉದ್ದೇಶದ ಗುರಿ ತಲುಪಲು ಇಚ್ಚಾಶಕ್ತಿಯೊಂದಿಗೆ ದುಡಿಯುತ್ತಾರೆ. ಅವರು ಫಲಿತಾಂಶದ ಬಗ್ಗೆ ಹೆಚ್ಚು ಗಮನ ಹರಿಸುವುದನ್ನು ನಾನು ನೋಡಿದ್ದೇನೆ ಎಂದರು.

ಕಮ್ಯೂನಿಟಿ ಸೆಂಟರ್ ಮೂಲಕ ಒಂದು ವರ್ಷದ ಅವಧಿಯಲ್ಲಿ ನಡೆದ ಯೋಜನೆಗಳಲ್ಲಿ ದುಡಿದ ಸುಮಾರು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಸೆಂಟರಿನ ವರ್ಷದ ವಿದ್ಯಾರ್ಥಿಯಾಗಿ ಶಬೀರ್ ಆಹ್ಮದ್ ಅವರನ್ನು, ವಿದ್ಯಾರ್ಥಿನಿಯಾಗಿ ಆಯಿಷಾ ಅಫಿಲಾರನ್ನು ಸನ್ಮಾನಿಸಲಾಯಿತು. ಸೆಂಟರಿನ ಮೂಲಕ ವಿವಿಧ ಕಾಲೇಜುಗಳಿಗೆ ದಾಖಲಾದ ವಿದ್ಯಾರ್ಥಿಗಳಲ್ಲಿ 2021-22 ನೇ ಅವಧಿಯ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸುಮಾರು 30 ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಸಪೊರ್ಟಿವ್ ಪೇರೆಂಟ್ ಪ್ರಶಸ್ತಿ, ಸೆಂಟರಿಗೆ ಹೆಚ್ಚು ವಿಝಿಟ್ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರತೀ ತಿಂಗಳು ಕಾಲೇಜಿನ ಪ್ರಗತಿ ತೋರಿಸಿ ಸಹಿ ಹಾಕಿದ ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು.

ಆರಂಭದ ವೇದಿಕೆಯಲ್ಲಿ ಯುವಕರ ಸಮಾವೇಶವನ್ನು ಯುವ ವಿದ್ಯಾರ್ಥಿಗಳು ನಿರ್ವಹಿಸಿದರು, ಅನಂತರ ಸೆಂಟರಿನ ಯುವತಿಯರ ಸಮಾವೇಶವನ್ನು ಸೆಂಟರಿನ ವಿದ್ಯಾರ್ಥಿನಿಯರು ನಿರ್ವಹಿಸಿದರು.

ಯುವತಿಯರ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿ.ಆರ್.ಪಿ ಶಶಿಕಲಾರವರು, ಈ ವಿದ್ಯಾರ್ಥಿಗಳ ಪ್ರತಿಭೆ ನೋಡಿ ಮೂಕಸ್ಮಿತನಾದೆ, ಇವರನ್ನು ಸಣ್ಣ ಪ್ರಾಯದಲ್ಲೇ ತರಬೇತುಗೊಳಿಸಿದ್ದರೆ ಇಂದು ಇವರು ದೇಶವೇ ಗುರುತಿಸುವ ಸಾಧನೆ ಮಾಡುತ್ತಿದ್ದರು. ಈಗಲಾದರೂ ಈ ಯುವತಿಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ತಮ್ಮೊಳಗಿರುವ ಕಾಳಜಿ ನಿರೂಪಿಸಲು ಕಮ್ಯುನಿಟಿ ಸೆಂಟರ್ ವೇದಿಕೆ ನೀಡಿದೆ. ಅವರು ಅದನ್ನು ಅತ್ಯದ್ಭುತವಾಗಿ ನಿರ್ವಹಿಸಿದರು ಎಂದರು.

ಕಾರ್ಯಕ್ರಮದ ಅತಿಥಿಯಾಗಿ ಡೈಮಂಡ್ ಇಂಟರ್ ನ್ಯಾಶನಲ್ ಕಾಲೇಜಿನ ಮುಖ್ಯಸ್ಥರಾದ ಸನಾ ಅಲ್ತಾಫ್ ಸೆಂಟರ್ ನ ಮೂಲಕ ಉನ್ನತ ಪದವಿ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿದರು.

ಕಳೆದ ಬಾರಿ ಪಿಎಸ್‌ಐಗೆ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಬದುರಿನ್ನೀಸಾ ಮಾತನಾಡಿ, ಒಂದು ವರ್ಷದಲ್ಲಿ ಸಂಸ್ಥೆ ಮಾಡಿರುವ ಸಾಧನೆ ನೋಡಿದಾಗ ಅಭಿಮಾನವಾಯಿತು. ಮುಂದೆ ನಾನು ನಿಮ್ಮೊಂದಿಗೆ ಇದ್ದೇನೆ ಎಂದರು.

ಕಾರ್ಯಕ್ರಮದಲ್ಲಿದ್ದ ತಸ್ನಿ ಅಮ್ಜದ್ ಖಾನ್, ಡಾ. ಸುನೈನಾ ಪೊಳ್ಯ ಮತ್ತು ಆಯಿಷಾ ಕಲೀಲ್ ರವರು ಸೆಂಟರಿನ ಕೌನ್ಸಿಲರ್ ಗಳಾಗಿ ಸೇವೆ ಸಲ್ಲಿಸಿದ ಡಾ. ವಾಜಿದ, ಡಾ. ಖತೀಜ ಲೂಲು, ರಮ್ಲತ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಳೆದ ಒಂದು ವರ್ಷ ಸಂಸ್ಥೆಯು ನಾಲ್ಕು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಸರ್ವೆ ನಡೆಸುತ್ತು, ಈ ಸರ್ವೆಯಲ್ಲಿ ಭಾಗವಹಿಸಿದ್ದ, ಮೌಲ್ಯಮಾಪನ ಮಾಡಿದ್ದ, ಕಾಲ್ ಸೆಂಟರ್ ನಿರ್ವಹಿಸಿದ್ದ ವಿದ್ಯಾರ್ಥಿನಿಯರಿಗೆ ಅಭಿನಂದಿಸಲಾಯಿತು. 17 ವಿಲೇಜ್ ಟ್ಯೂಷನ್ ಸೆಂಟರ್, 4 ಮದರಸ ಟ್ಯೂಷನ್ ಸೆಂಟರ್, 8 ಸಬ್ಜೆಕ್ಟ್ ಎಕ್ಸ್ ಪರ್ಟ್ ಕೊಚಿಂಗ್ ಸೆಂಟರ್ ನಡೆಸುವ ವಿದ್ಯಾರ್ಥಿನಿಯರನ್ನು ಗೌರವಿಸಿ, ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಮ್ಯುನಿಟಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಫೌಂಡೇಶನ್ ಅಧ್ಯಕ್ಷರಾದ ಅಮ್ಜದ್ ಖಾನ್ ಪೊಳ್ಯ ಮಾತನಾಡುತ್ತಾ, ನಾವು ಸಬಲೀಕರಣದ ಕುರಿತಂತೆ ಮಾತನಾಡುತ್ತೇವೆ. ಸಬಲೀಕರಣದ ಮಾನದಂಡ ಏನು ? ಬೌದ್ಧಿಕವಾದ ಸಬಲೀಕರಣದಿಂದ ದೇಶಕ್ಕೆ ಮತ್ತು ಭಾರತದ ಸಮಾಜಕ್ಕೆ  ಆಗಿರುವ ಲಾಭಗಳು ಏನು ? ನಮ್ಮಲ್ಲಿರು ಎಲ್ಲಾ ಕಮ್ಯೂನಿಟಿಯ ಹೆಚ್ಚಿನ ಅತ್ಯುನ್ನತ ಪದವಿ ಪಡೆದವರು ಅಮೆರಿಕಾ, ಲಂಡನ್, ಜರ್ಮನಿ ಮುಂತಾದ ರಾಷ್ಟ್ರದಲ್ಲಿ ಬಹಳ ಅನುಕೂಲತೆಯೊಂದಿಗೆ ಬದುಕುತ್ತಿದ್ದಾರೆ. ಅವರಿಗೆ ಈ ನಾಡಿನ ತಲಮಟ್ಟದ ಜನರ ಸ್ಥಿತಿಗತಿಯ ಬಗ್ಗೆ ಯಾವುದೇ ಅರಿವು ಇಲ್ಲ. ಅದನ್ನು ಕೇಳುವ ಅಥವಾ ಅರಿತುಕೊಳ್ಳುವ ಆಸಕ್ತಿಯೂ ಅವರಿಗಿಲ್ಲ. ನಮ್ಮ ನಾಡಿನ ಹೆಚ್ಚಿನ ಯುವ ಸಮೂಹ ಆಧುನಿಕ ವಿಜ್ಞಾನ, ತಂತ್ರಜ್ಞಾನದ ಲೋಕದಲ್ಲಿ ವಿಕ್ಟಿಮ್ ಗಳಾಗಲಿದ್ದಾರೆ. ಹಾಗಾಗಿ ನಾವು ಎಲ್ಲಾ ಕಮ್ಯುನಿಟಿಯ ನವ ಪೀಳಿಗೆಯನ್ನು ಜಗತ್ತಿನೊಂದಿಗೆ ಸ್ಪರ್ಧಿಸಲು ತರಬೇತುಗೊಳಿಸಬೇಕಿದೆ. ಅದು ಒಕ್ಕಲಿಗ, ಭಂಟ್ಸ್, ಲಿಂಗಾಯಿತ, ಬಿಲ್ಲವ, ದಲಿತ ಯಾವ ಕಮ್ಯುನಿಟಿ ಆಗಿದ್ದರೂ ಅವರ ಮಕ್ಕಳ ಅಭಿವೃದ್ದಿಗೆ ಈ ಕಮ್ಯುನಿಟಿ ಸೆಂಟರ್ ದುಡಿಯಲಿದೆ ಎನ್ನುವ ವಿಶ್ವಾಸ ಕೊಡುತ್ತೇನೆ ಎಂದ ಅಮ್ಜದ್ ಖಾನ್ ಹೇಳಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ಲ ಕುಂಞಿ ಪಟ್ಟೆ, ರಿಯಾಝ್ , ಸೆಂಟರಿನ ಉಪಾದ್ಯಕ್ಷರಾದ ಶೇಖ್ ಅಬ್ದುಲ್ಲಾ, ಸತ್ತಾರ್, ಇಮ್ತಿಯಾಝ್ ಪಾರ್ಲೆ, ಮುನೀರ್ ವಿಟ್ಲ, ಸಂಶುದ್ದೀನ್ ಬೈರಿಕಟ್ಟೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News