ಬ್ರಹ್ಮಗಿರಿ ಸರ್ಕಲ್‌ನಲ್ಲಿನ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಗಡುವು; ಹೋರಾಟದ ಎಚ್ಚರಿಕೆ

Update: 2022-08-16 14:32 GMT

ಉಡುಪಿ: ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಶುಭ ಕೋರಲು ಹಾಕಲಾದ ಸಾವರ್ಕರ್ ಭಾವಚಿತ್ರ ಇರುವ ಪ್ಲೆಕ್ಸ್‌ನ್ನು ಕೂಡಲೇ ತೆರವುಗೊಳಿಸುವಂತೆ ಮಂಗಳವಾರ ಸ್ಥಳದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ರಹ್ಮಗಿರಿ ಸರ್ಕಲ್‌ಗೆ ಆಗಮಿಸಿ, ವಿವಾದಿತ ಫ್ಲೆಕ್ಸ್‌ನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾಳೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಖ್ಯಾತ್ ಶೆಟ್ಟಿ, ಸಾರ್ವಕರ್ ಫ್ಲೆಕ್ಸ್ ವಿಚಾರದಲ್ಲಿ ರಾಜ್ಯದ ಎಲ್ಲ ಕಡೆ ಗಲಾಟೆಗಳು ನಡೆಯುತ್ತಿವೆ. ಇದೀಗ  ಶಾಂತಾವಾಗಿರುವ ಉಡುಪಿಯಲ್ಲಿ ಹಾಕಿರುವ ಫ್ಲೆಕ್ಸ್‌ನಿಂದ ಗೊಂದಲ ಹಾಗೂ ಬಿಗುವಿನ ವಾತಾವರಣಗಳು ಕಂಡುಬರುತ್ತಿವೆ. ಆದುರಿಂದ ಯಾವುದೇ ಗಲಾಟೆ ಗಳಿಗೆ ಅವಕಾಶ ಕಲ್ಪಿಸದಂತೆ ಕೂಡಲೇ ಈ ಫ್ಲೆಕ್ಸ್‌ನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ನಗರಸಭೆಯವರು ಬ್ಯಾನರ್‌ಗೆ 15 ದಿನಗಳ ಕಾಲ ಪರವಾನಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಫ್ಲೆಕ್ಸ್‌ನಲ್ಲಿ ಯಾವುದೇ ಲೈನ್ಸನ್ ನಂಬರ್ ಹಾಕಿಲ್ಲ. ಒಂದು ವೇಳೆ ಅನುಮತಿ ನೀಡಿದ್ದರೂ ಇಂತಹ ಗೊಂದಲದ ಪರಿಸ್ಥಿತಿ ಯಲ್ಲಿ ಈ ಫ್ಲೆಕ್ಸ್ ಇಟ್ಟುಕೊಳ್ಳುವುದು ಸರಿಯಲ್ಲ. ಫ್ಲೆಕ್ಸ್ ಹಾಕಿದವರೆ ನಾಳೆ ಉದ್ದೇಶ ಪೂರ್ವಕವಾಗಿ ಗಲಾಟೆ ಸೃಷ್ಠಿಸಲು ಫ್ಲೆಕ್ಸ್‌ಗೆ ಹಾನಿ ಮಾಡುವ ಸಾಧ್ಯತೆ ಗಳು ಕೂಡ ಇರುತ್ತದೆ. ಒಂದು ಫ್ಲೆಕ್ಸ್ ಕಾಯಲು ಇಡೀ ಪೊಲೀಸ್ ಪಡೆಯನ್ನು ಇಲ್ಲಿ ನಿಯೋಜಿಸಿರುವುದು ನಾಚಿಕೆಗೇಡು. ಇಲ್ಲಿ ಸರಕಾರ ಎಂಬುದು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.

ಬಳಿಕ ಕಾಂಗ್ರೆಸ್ ಕಾರ್ಯಕರ್ತರ ನಿಯೋಗ ಉಡುಪಿ ನಗರಸಭೆಗೆ ತೆರಳಿ, ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿತು. ಇಂದಿನ ಗೊಂದಲದ ವಾತಾವರಣದಲ್ಲಿ ಯಾವುದೇ ವಿವಾದಕ್ಕೆ ಕಾರಣ ಆಗದಂತೆ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಿರುವ ಫ್ಲೆಕ್ಸ್‌ನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೆರ, ಹಮದ್, ಶರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಬ್ರಹ್ಮಗಿರಿ ಸರ್ಕಲ್‌ನಲ್ಲಿ ಬಿಗಿ ಬಂದೋಬಸ್ತ್

ವಿವಾದಿತ ಫ್ಲೆಕ್ಸ್ ಹಿನ್ನೆಲೆಯಲ್ಲಿ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇಂದು ಕೂಡ ಮುಂದುವರೆಸಲಾಗಿದೆ.

ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್ ಭದ್ರತೆ ಪರಿಶೀಲನೆ ನಡೆಸಿದರು. ಒಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ನಗರ ಠಾಣೆಯ ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News