ಕೊಲೆ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರ; ಎಡಿಜಿಪಿಯ ತಾರತಮ್ಯ ಹೇಳಿಕೆಗೆ ಯು.ಟಿ. ಖಾದರ್ ಆಕ್ಷೇಪ

Update: 2022-08-16 18:16 GMT
ಯು.ಟಿ.ಖಾದರ್

ಮಂಗಳೂರು, ಆ. 16: ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ಕೋಮುದ್ವೇಷಕ್ಕೆ ಬಲಿಯಾದ ಮಂಗಳಪೇಟೆಯ ಫಾಝಿಲ್ ಮತ್ತು ಬೆಳ್ಳಾರೆಯ ಮಸೂದ್ ಕೊಲೆ ಪ್ರಕರಣದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ತಾರತಮ್ಯದ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಜ್ಯ ಎಡಿಜಿಪಿ ಅಲೋಕ್ ಕುಮಾರ್‌ಗೆ ಪತ್ರ ಬರೆದಿರುವ ಯು.ಟಿ.ಖಾದರ್, ಇತ್ತೀಚೆಗೆ ನಡೆದ ಸರಣಿ ಕೊಲೆಗಳ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ತಾವು ನೀಡಿರುವ ಹೇಳಿಕೆಯು ತಾರತಮ್ಯದಿಂದ ಕೂಡಿದೆ. ಈ ಬಗ್ಗೆ ಜನ ಸಾಮಾನ್ಯರ ಸಂಶಯ ನಿವಾರಿಸಿ, ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಮೂಡುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸರಣಿ ಕೊಲೆಗಳ ಆರೋಪಿಗಳನ್ನು ಬಂಧಿಸಲು, ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಮತ್ತು ಕೊಲೆಗಳ ಸರಣಿ ಮುಂದುವರಿಯದಂತೆ ತಡೆಯಲು ಪೊಲೀಸ್ ಇಲಾಖೆ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಅದಲ್ಲದೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಾವು ನೀಡಿದ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಸಮಾಜದಲ್ಲಿ ಭಯ ಹುಟ್ಟಿಸುವ ಸಮಾಜಘಾತುಕ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಬೆಂಬಲವೂ ಇದೆ. ಆದರೆ ಕೋಮು ದ್ವೇಷಕ್ಕೆ ಬಲಿಯಾದ ಫಾಝಿಲ್ ಮತ್ತು ಮಸೂದ್ ಹಾಗೂ  ಕೊಲೆ ಪ್ರಕರಣ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ತಾವು ಏಕೆ ಮೌನ  ಎಂದು ಖಾದರ್ ಪ್ರಶ್ನಿಸಿದ್ದಾರೆ.

ಇದು ನಾಗರಿಕ ಸಮಾಜದ ಪ್ರತಿಯೊಬ್ಬರ ಪ್ರಶ್ನೆಯೂ ಆಗಿದೆ. ಹಾಗಾಗಿ ಜಿಲ್ಲೆಯ ಜನರ ಮತ್ತು ಸಮಾಜದ ಅನುಮಾನ ಹಾಗೂ ಪ್ರಶ್ನೆಗಳನ್ನು ಜವಾಬ್ದಾರಿಯುತ ಶಾಸಕನಾಗಿ ನಾನು ನಿಮ್ಮ ಮುಂದೆ ಈ ಪ್ರಶ್ನೆಯನ್ನಿಡುತ್ತಿದ್ದೇನೆ ಎಂದು ಖಾದರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಅನುಮಾನಗಳನ್ನು ಬಗೆಹರಿಸಿ, ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಬರುವಂತಹ ಸೂಕ್ತ ಉತ್ತರವನ್ನು ನಿಮ್ಮಿಂದ ನಿರೀಕ್ಷಿಸಿದ್ದೇವೆ ಮತ್ತು ಉತ್ತರ ನೀಡುತ್ತೀರಿ ಎನ್ನುವ ವಿಶ್ವಾಸವೂ ನನಗಿದೆ ಎಂದು ಖಾದರ್ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News