×
Ad

ಬ್ರಹ್ಮಗಿರಿ; ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ವಿವಾದ: ಬಿಜೆಪಿ ಯುವಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ

Update: 2022-08-17 12:30 IST

ಉಡುಪಿ, ಆ.17: ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಆಳವಡಿಸಲಾದ ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ವಿವಾದವು ಬುಧವಾರ ತಾರಕ್ಕೇರಿದ್ದು, ಈ ಫ್ಲೆಕ್ಸ್‌ಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು, ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ಆಳವಡಿಸಲಾಗಿರುವ ಸರ್ಕಲ್‌ನ್ನು ಕಾರ್ಯಕರ್ತರು ಶುಚಿಗೊಳಿಸಿ, ಹೂವು ಹಾರ ಹಾಕಿದರು. ಬಳಿಕ ಫ್ಲೆಕ್ಸ್‌ಗೆ ಮಾಲಾರ್ಪಣೆಗೈದ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತ ಅಲ್ಲೇ ಸಮೀಪದ ನಾಯರ್‌ಕೆರೆಯಲ್ಲಿರುವ ಕಾಂಗ್ರೆಸ್ ಭವನದ ಕಡೆ ತೆರಳಿದರು.

ಕಾಂಗ್ರೆಸ್ ಭವನದ ಆವರಣದೊಳಗೆ ಪ್ರವೇಶಿಸಿದ ಯುವ ಮೋರ್ಚಾ ಕಾರ್ಯಕರ್ತರು, ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಮುಂದೆ ಹೋಗದಂತೆ ತಡೆದರು. ಇದರಿಂದ ಪೊಲೀಸರು ಹಾಗೂ ಕಾರ್ಯ ಕರ್ತರ ಮಧ್ಯೆ ತಳ್ಳಾಟ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಕಾರರನ್ನು ಹಿಂದಕ್ಕೆ ಕಳುಹಿಸಿದರು.

ಅಲ್ಲಿಂದ ಬ್ರಹ್ಮಗಿರಿ ಸರ್ಕಲ್‌ನತ್ತ ವಾಪಾಸ್ಸಾದ ಪ್ರತಿಭಟನಕಾರರು ರಸ್ತೆ ಮಧ್ಯೆ ಧರಣಿ ಕುಳಿತು ಕಾಂಗ್ರೆಸ್ ವಿರುದ್ಧ ಹಾಗೂ ಸಾವರ್ಕರ್ ಪರವಾಗಿ ಘೋಷಣೆ ಗಳನ್ನು ಕೂಗಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಪೊಲೀಸರ ಎಚ್ಚರಿಕೆ ಬಳಿಕ ಪ್ರತಿಭಟನಕಾರರು ಧರಣಿ ಕೈಬಿಟ್ಟು ವಾಪಾಸ್ಸಾದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಸುಮಿತ್ ತಲ್ಲೂರು, ಅಕ್ಷಿತ್ ಶೆಟ್ಟಿ, ನಗರಸಭಾ ಸದಸ್ಯರಾದ ಗಿರೀಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

‘ನಿಮಗೂ ಜವಾಬ್ದಾರಿ ಇದೆ’

‘ನೀವು ಮಾಡಿರುವುದು ಸರಿ ಇಲ್ಲ. ನಿಮ್ಮ ಸರಕಾರ ಇರುವಾಗ ನಿಮಗೂ ಜವಾಬ್ದಾರಿ ಇದೆ. ಅದಕ್ಕಿಂತ ಹೆಚ್ಚು ನಾನು ಏನೂ ಹೇಳುವುದಿಲ್ಲ’ ಎಂದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಮೋರ್ಚಾ ಕಾರ್ಯ ಕರ್ತರಿಗೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಈ ಹಿನ್ನೆಲೆ ಯಲ್ಲಿ ಪ್ರತಿಭಟನಕಾರರು ರಸ್ತೆ ಮಧ್ಯೆ ನಡೆಸುತ್ತಿದ್ದ ಧರಣಿಯನ್ನು ಕೈಬಿಟ್ಟು ಹೊರಟು ಹೋದರು.

ಕೇಸರಿ ಧ್ವಜ ತೆರವುಗೊಳಿಸಿದ ಪೊಲೀಸರು

ಸಾವರ್ಕರ್ ಫ್ಲೆಕ್‌ನ ಎರಡು ಇಕ್ಕೇಲಗಳಿಗೂ ಬೆಳಗ್ಗೆ ಮಾರ್ಲಾಪಣೆ ಜೊತೆಗೆ ಕೇಸರಿ ಧ್ವಜವನ್ನು ಕೂಡ ಕಟ್ಟಲಾಗಿತ್ತು.

ಆದರೆ ಯಾವುದೇ ಅನುಮತಿ ಇಲ್ಲದೆ ಹಾಕಲಾಗಿರುವ ಕೇಸರಿ ಧ್ವಜವನ್ನು ತೆರವುಗೊಳಿಸುವಂತೆ ಪೊಲೀಸರು ಕಟೌಟ್ ಹಾಕಿದವರಿಗೆ ಸೂಚಿಸಿದರು. ಬಳಿಕ ಅವರೇ ಧ್ವಜವನ್ನು ಕಟೌಟ್‌ನಿಂದ ತೆರವುಗೊಳಿಸಿದರು.

ಬಿಜೆಪಿ ಮುಖಂಡರಿಂದಲೂ ಫ್ಲೆಕ್ಸ್‌ಗೆ ಮಾಲಾರ್ಪಣೆ

ಸಾವರ್ಕರ್ ಫ್ಲೆಕ್ಸ್‌ಗೆ ಬಿಜೆಪಿ ಹಿಂದುಳಿದವರ್ಗ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಫಾಲ್ ಸುವರ್ಣ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಮಾಲಾರ್ಪಣೆ ಮಾಡಲಾಯಿತು.

ಬಳಿಕ ಮಾತನಾಡಿದ ಅವರು, ಅಶಾಂತಿಯ ವಾತವರಣ, ಕೋಮುಗಲಭೆಗೆ ಹುನ್ನಾರ, ಸಾರ್ವಜನಿಕ ಸೊತ್ತನ್ನು ನಾಶ ಮಾಡುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸ್ವಾಂತ್ರೋತ್ಸವದ ಸಂದರ್ಭದಲ್ಲಿ ತಮ್ಮ ಚಾಳಿಯನ್ನು ಮುಂದುವರಿಸಿದೆ. ಸಾರ್ವಕರ್ ಮತ್ತು ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದೇವೆ. ಮುಂದೆ ಸಾರ್ವಕರ್ ಅವರ ಪುತ್ಥಳಿ ನಿರ್ಮಿಸಿ ದಿಟ್ಟ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬ್ರಹ್ಮಗಿರಿಯಲ್ಲಿ ಭದ್ರತೆ ಹೆಚ್ಚಳ

ಇಂದಿನ ಬೆಳವಣಿಗೆ ಹಿನ್ನೆಲೆಯಲ್ಲಿ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಪೊಲೀಸ್ ಭದ್ರತೆ ಯನ್ನು ಇನ್ನಷ್ಟು ಬಿಗಿಗೊಳಿಸಲಾಯಿತು.

ಒಂದು ಕೆಎಸ್‌ಆರ್‌ಪಿ ತುಕಡಿ, ಡಿಎಆರ್ ಹಾಗೂ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಯ್ಯ, ಡಿವೈಎಸ್ಪಿ ಸುಧಾಕರ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಭದ್ರತೆ ನೇತೃತ್ವ ವಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News