ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಕಡೆಗಣನೆ, ಮೂಲಭೂತ ಸೌಕರ್ಯ ಸಹಿತ ಮೇಲ್ದರ್ಜೆಗೇರಿಸಲು ಸಿಪಿಐಎಂ ಒತ್ತಾಯ

Update: 2022-08-17 09:33 GMT

ಮಂಗಳೂರು: ಮಹಾನಗರ ಪಾಲಿಕೆ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಸಹಯೋಗದೊಂದಿಗೆ ಕಾರ್ಯಾಚರಿಸುತ್ತಿರುವ ಲೇಡಿಹಿಲ್‌ ಸರಕಾರಿ ನಗರ ಆರೋಗ್ಯ ಕೇಂದ್ರ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದೆ. ಈ ಆರೋಗ್ಯ ಕೇಂದ್ರವನ್ನು ಕೂಡಲೇ ಎಲ್ಲಾ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೇರಿಸಲು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಆಗ್ರಹಿಸುತ್ತದೆ.

ಮಂಗಳೂರು ನಗರ ಹೃದಯಭಾಗ ಜನ ತಮ್ಮನ್ನು ಕಾಡುವ ರೋಗಗಳಿಗೆ ಚಿಕಿತ್ಸೆ ಪಡೆಯಲು ಲೇಡಿಹಿಲ್ ವೃತ್ತದ ಬಳಿಯಿರುವ ಸರಕಾರಿ ನಗರ ಆರೋಗ್ಯಕೇಂದ್ರಕ್ಕೆ ತೆರಳಿದರೆ ಅಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಲಭ್ಯವಿರುವುದಿಲ್ಲ. ಈ‌ ಸರಕಾರಿ ನಗರ ಆರೋಗ್ಯ ಕೇಂದ್ರ ತೀರಾ ಕೆಳಮಟ್ಟದಲ್ಲಿದ್ದು ಜೌಷಧಿ, ನುರಿತ ವೈದ್ಯರು ‌ಸಹಿತ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಆರೋಗ್ಯ ಕೇಂದ್ರದ ಕಟ್ಟಡವೂ ಹಳೆಯದಾಗಿದ್ದು ಚಾವಣಿಯು ಸಂಪೂರ್ಣ ಸೋರುತ್ತಿದೆ. ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೂ ನೀಡಬೇಕಾದ ಔಷಧಿಗಳು ಈ ಆರೋಗ್ಯ ಕೇಂದ್ರದಲ್ಲಿ  ಲಭ್ಯವಿಲ್ಲದೆ ರೋಗಿಗಳು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕನಿಷ್ಟ ಜ್ವರದಂತಹ ಕಾಯಿಲೆಗಳಿಗೂ ನೀಡಬೇಕಾದ ಮಾತ್ರೆಗಳನ್ನು ನಗರ ಪಾಲಿಕೆ ಸರಬರಾಜು ಮಾಡದೆ ಇರುವ ಕಾರಣ ರೋಗಿಗಳು ಅವೆಲ್ಲವುಗಳನ್ನು ಹೊರಗಿನಿಂದ ಹಣತೆತ್ತು ಪಡೆಯಬೇಕಾದ ಸಂಕಷ್ಟದ ಸ್ಥಿತಿ ಎದುರಾಗಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಪಾಲಿಕೆ ಆಡಳಿತವು ಲೇಡಿಹಿಲ್ ನ‌ ಸರಕಾರಿ ನಗರ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧಿ, ನುರಿತ ವೈದ್ಯರು ಸಹಿತ ಎಲ್ಲಾ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಸರಿಪಡಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ಈ ಆರೋಗ್ಯ ಕೇಂದ್ರವನ್ನು ಸುಸಜ್ಜಿತ ಕಟ್ಟಡ ಸಹಿತ ಮೇಲ್ದರ್ಜೆಗೇರಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಒತ್ತಾಯಿಸುತ್ತದೆ ಎಂದು ಕಾರ್ಯದರ್ಶಿ ‌ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News