×
Ad

ಸಾವರ್ಕರ್ ಭಾವಚಿತ್ರ ಅಳವಡಿಸಲು ಕಾಂಗ್ರೆಸಿಗರ ಅನುಮತಿ ಅಗತ್ಯವಿಲ್ಲ: ಶಾಸಕ ವೇದವ್ಯಾಸ ಕಾಮತ್

Update: 2022-08-17 18:19 IST

ಮಂಗಳೂರು, ಆ.17: ಸಾವರ್ಕರ್ ಭಾವಚಿತ್ರ ಅಳವಡಿಸಲು ಸಿದ್ದರಾಮಯ್ಯ ಅಥವಾ ಕಾಂಗ್ರೆಸಿಗರ ಅನುಮತಿಯ ಅಗತ್ಯವಿಲ್ಲ. ಸಾವರ್ಕರ್ ಅವರು ನಮಗೆ ಎಂದಿಗೂ ಆದರ್ಶವೆಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮುಸಲ್ಮಾನರ ಏರಿಯಾದಲ್ಲಿ ಸಾವರ್ಕರ್ ಭಾವಚಿತ್ರ ಏಕೆ ಎಂಬ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ಮುಸಲ್ಮಾನರ ಏರಿಯಾಗಳಲ್ಲಿ ಸಾವರ್ಕರ್ ಚಿತ್ರ ಯಾಕೆ ಎನ್ನುವ ಸಿದ್ದರಾಮಯ್ಯನವರೇ ಮುಸಲ್ಮಾರ ಏರಿಯಾಗಳು ಪಾಕಿಸ್ತಾನದಲ್ಲಿವೆಯಾ? ಭಾರತದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಭಾವಚಿತ್ರ ಬಳಸುವುದಕ್ಕೆ ಸಿದ್ದರಾಮಯ್ಯ ಅಥವ ಕಾಂಗ್ರೆಸಿಗರ ಅನುಮತಿ ಬೇಕಿಲ್ಲ. ಸುಮ್ಮನೆ ಎರಡೆರಡು ಜೀವಾವಧಿ ಶಿಕ್ಷೆಯ ಬಿರುದು ಪಡೆದವರಲ್ಲ ಸಾವರ್ಕರ್. ಅಂಡಮಾನಿನ ಕಡು ಕತ್ತಲೆ ಕೋಣೆಯೊಳಗೂ ಸ್ವಾತಂತ್ರ್ಯದ ಕುರಿತು ಚಿಂತಿಸುತಿದ್ದ ಅವರನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ಸವೆಸಿದ ಕಾರಣಕ್ಕಾಗಿ ಅವರನ್ನು ಸ್ವಾತಂತ್ರ್ಯ ವೀರ ಎಂದು ಕರೆಯುತ್ತಾರೆಯೇ ವಿನಃ ತಮಗೆ ತಾವೇ ಭಾರತ ರತ್ನ ಕೊಟ್ಟಂತೆ ಪಡೆದ ಬಿರುದಲ್ಲ ಅದು. ಕರಿನೀರ ಶಿಕ್ಷೆ ದೂರದ ಮಾತು, ಐಷಾರಾಮಿ ವ್ಯವಸ್ಥೆಗಳಿದ್ದ ಜೈಲಿನೊಳಗೆ ರಾಜಕೀಯ ಕೈದಿಯಾಗಿ ಸೇರಿ ಅನಾರೋಗ್ಯದ ಕಾರಣ ನೀಡಿ ಕ್ಷಮಾರ್ಪಣೆ ಪತ್ರ ಬರೆದವರು ವೀರ ಸಾವರ್ಕರ್ ಕುರಿತು ಆಡಿಕೊಳ್ಳುವುದು ಹಾಸ್ಯಾಸ್ಪದ ಎಂದು ಶಾಸಕ ಕಾಮತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News