ಮಂಗಳೂರು: ಬಿಸಿಯೂಟ ನೌಕರರ ಪ್ರತಿಭಟನೆ

Update: 2022-08-17 14:50 GMT

ಮಂಗಳೂರು : ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಬಿಸಿಯೂಟ ಕಾರ್ಮಿಕರು ಬೆಂಗಳೂರಿನ ಪ್ರೀಡಂ ಪಾರ್ಕಿನ ಮುಂದೆ ಮಂಗಳವಾರ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ಕಚೇರಿಯ ಮುಂದೆ ಬುಧವಾರ ಬಿಸಿಯೂಟ ನೌಕರರು ಪ್ರತಿಭಟನೆ ನಡೆಸಿದರು.

60 ವರ್ಷ ಪ್ರಾಯದ ನಿವೃತ್ತ ಕಾರ್ಮಿಕರಿಗೆ 1 ಲಕ್ಷ ರೂ. ಪರಿಹಾರ ಮತ್ತು ಪಿಂಚಣಿ ನೀಡಬೇಕು, ಮಾಸಿಕ ವೇತನ ಹಾಗೂ ಏರಿಕೆಯಾದ ವೇತನ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸಲಾಗುತ್ತದೆ.

ದ.ಕ.ಜಿಪಂ ಕಚೇರಿ ಮುಂದೆ ನಡೆದ ಪ್ರತಿಭಟನೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಳೆದ ೧೯ ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡದೆ ನಿವೃತ್ತಿಗೊಳಿಸಿರುವುದು ಖಂಡನೀಯ.ಬಿಸಿಯೂಟ ಕಾರ್ಮಿಕರು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದುಡಿಯುತ್ತಿರುವ ಮಾಸಿಕ ವೇತನವನ್ನು ಕೂಡಾ ನೀಡದಿರುವ ಸರಕಾರ ಏರಿಕೆಯಾದ 1000 ರೂ.ವನ್ನು ನೀಡದೆ ಶೋಷಣೆ ಮಾಡುತ್ತಿದೆ ಎಂದು ಆಪಾದಿಸಿದರು.

ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ಸಂಘದ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ, ಜಿಲ್ಲಾಧ್ಯಕ್ಷೆ ಭವ್ಯಾ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ ಸಮಾರೋಪ ಭಾಷಣ ಮಾಡಿದರು. ಜಯಶ್ರೀ ಸ್ವಾಗತಿಸಿ, ಲಲಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News