‘ಹಿಂದೂ ರಾಷ್ಟ್ರ’ ಬರೆದಿರುವ ಕಟೌಟ್ ತೆರವಿಗೆ ಎಸ್‌ಡಿಪಿಐ ಆಗ್ರಹ

Update: 2022-08-17 16:33 GMT

ಉಡುಪಿ, ಆ.17: ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಂವಿಧಾನ ವಿರೋಧಿ ಜೈ ಹಿಂದೂ ರಾಷ್ಟ್ರ ಎಂಬುದಾಗಿ ಬರೆದ ಬ್ಯಾನರ್‌ನ್ನು ಉಡುಪಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ತೆರವುಗೊಳಿಸಬೇಕೆಂದು ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾ ಎಸ್‌ಡಿಪಿಐ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಆರ್‌ಎಸ್‌ಎಸ್ ಪರಿಕಲ್ಪನೆಯಾಗಿದೆ. ಹಿಂದೂ ಮತ ಪಡೆಯಲು, ಬೇರೆಯವರಿಂದ ಬೇರ್ಪಡಿಸಲು ಈ ಷಡ್ಯಂತ್ರ ನಡೆಸಲಾಗುತ್ತಿದೆ. ಉದ್ಯೋಗ ಇಲ್ಲದೆ ಹಿಂದೂ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ. ಹಿಂದೂಗಳು ಕಷ್ಟದಲ್ಲಿದ್ದಾರೆ. ಬ್ರಾಹ್ಮಣರು ಈ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಡಲು ಯತ್ನಿಸುತ್ತಿದ್ದಾರೆ. ಶಾಂತಿಭಂಗ ಮಾಡುವ, ಜನರನ್ನು ಉದ್ರೇಕಿಸಲು ಜನರ ಮತ ಗಳಿಸಲು ಈ ಷಡ್ಯಂತ್ರವಾಗಿದೆ ಎಂದು ದೂರಿದರು.

ಸಾವರ್ಕರ್ ಭಾವಚಿತ್ರಕ್ಕೆ ನಮ್ಮದು ದೊಡ್ಡ ಅಭ್ಯಂತರ ಇಲ್ಲ. ಈಗ ಸರಕಾರ ತಮಗೆ ಬೇಕಾದವರ ಭಾವಚಿತ್ರ ಹಾಕುತ್ತಿದೆ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹಿಂದೂ ರಾಷ್ಟ್ರ ಎಂದು ಬರೆದ ವಿವಾದಿತ ಈ ಬ್ಯಾನರ್ ತೆರವು ಮಾಡಬೇಕು. ಪೊಲೀಸರು ಜನರ ಭರವಸೆ ಹುಸಿ ಮಾಡಬಾರದು. ಉಡುಪಿಯಲ್ಲಿನ ಉಸಿರುಗಟ್ಟುವ ವಾತಾವರಣ ತಿಳಿಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ನಾವು ಹಿಂದು ರಾಷ್ಟ್ರದ ಪರಿಕಲ್ಪನೆ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ. ಹಿಂದೂ ರಾಷ್ಟ್ರವಾದರೆ ಆಗುವ ಸಮಸ್ಯೆಯನ್ನು ಸಾರ್ವಜನಿಕರಿಗೆ ತಿಳಿಸುತ್ತೇವೆ. ನಾವು ಯಾರಿಗೂ ಕೌಂಟರ್ ಕೊಡಲ್ಲ. ಸಂವಿಧಾನ ವಿರೋಧಿ ಕೃತ್ಯ ಆಗದಂತೆ ತಡೆಯಬೇಕು. ಹೋರಾಟದ ಮೂಲಕ ಶಾಂತಿ ನೆಲೆಗೆ ಪ್ರಯತ್ನ ಮಾಡುತ್ತೇವೆ ಎಂದು ಎಸ್‌ಡಿಪಿಐ ಕಾಪು ಕ್ಷೇತ್ರ ಅಧ್ಯಕ್ಷ ಹನೀಫ್ ಮೂಳೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಉಡುಪಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News