ಹಿಂದೂ-ಮುಸ್ಲಿಮರು ಶತ್ರುಗಳಲ್ಲ: ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಮತ

Update: 2022-08-17 18:11 GMT

ಮಂಗಳೂರು : ಸಣ್ಣ ಪುಟ್ಟ ವಿಚಾರಗಳನ್ನೇ ಮುಂದಿಟ್ಟು ಕೆಲವು ಸಂಘಟನೆಗಳ ಯುವಕರು ಕೊಲೆ, ದೊಂಬಿಗೆ ಇಳಿದಿದುದರ ಪರಿಣಾಮ ಶಾಂತಿಪ್ರಿಯ ನಾಗರಿಕರು ರೋಸಿ ಹೋಗಿದ್ದಾರೆ. ಯುವಕರನ್ನು ಹಿಂಸೆಗೆ ಪ್ರಚೋದಿಸುವ ಸಲುವಾಗಿ ಕೆಲವರು ವೇದಿಕೆ ಕಟ್ಟಿ ಉದ್ವಿಗ್ನಕಾರಿ ಭಾಷಣಗೈದು ನಾಡಿನ ಶಾಂತಿ ಕೆಡಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಆ ಮೂಲಕ ದೇಶದಲ್ಲಿ ಹಿಂದೂ- ಮುಸ್ಲಿಮರು ಪರಸ್ಪರ ಶತ್ರುಗಳಂತೆ ಬಿಂಬಿಸಲಾಗುತ್ತದೆ. ಆದರೆ ಯಾವತ್ತೂ ಕೂಡ ಹಿಂದೂ-ಮುಸ್ಲಿಮರು ಶತ್ರುಗಳಲ್ಲ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‌ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಅಡ್ಯಾರ್‌ನಲ್ಲಿ ನಡೆದ ಸಭೆಯಲ್ಲಿ ‘ಸಂವಿಧಾನದ ನಾಲ್ಕನೇ ಅಂಗವೆಂದು ವಿಶ್ಲೇಷಿಸಲಾಗುವ ಕೆಲವು ಮಾಧ್ಯಮಗಳು ಜವಾಬ್ದಾರಿ ಮರೆತು ಉರಿಯುವ ಬೆಂಕಿಗೆ ತುಪ್ಪಹಾಕುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಪ್ರಜೆಗಳನ್ನೂ ಸಮಾನವಾಗಿ ಕಾಣಬೇಕಾದ ಸರಕಾರವು ತಾರತಮ್ಯ ನೀತಿ ಅನುಸರಿಸಿ ರಾಜ್ಯದಲ್ಲಿ ಅರಾಜಕತೆ ಉಂಟು ಮಾಡಿ ರಾಜಕೀಯ ಲಾಭಕ್ಕಾಗಿ ಶ್ರಮಿಸುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉಭಯ ಧಾರ್ಮಿಕ ಮುಖಂಡರು ಶಾಂತಿ ಮತ್ತು ಪ್ರೀತಿಯ ಸಂದೇಶಗಳ ಮೂಲಕ ಮಾರ್ಗದರ್ಶನ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿರುವ ಸಭೆಯು ಮುಂದಿನ ದಿನಗಳಲ್ಲಿ ಶಾಂತಿಗೆ ಪೂರಕವಾಗುವ ಉಪಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ದಾರಿಮಿ ಒಕ್ಕೂಟದ ಕೆಆರ್ ಹುಸೈನ್ ದಾರಿಮಿ ಸಭೆಯನ್ನು ಉದ್ಘಾಟಿಸಿದರು.

ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹೈದರ್ ದಾರಿಮಿ ಕರಾಯ, ತಬೂಕ್ ದಾರಿಮಿ, ಕುಕ್ಕಿಲ ದಾರಿಮಿ, ಕಡಬ ಸಿದ್ದೀಕ್ ದಾರಿಮಿ, ಸಂಪ್ಯ ಹಮೀದ್ ದಾರಿಮಿ, ಕೆಎಲ್ ಉಮರ್ ದಾರಿಮಿ, ಕೆಲಿಂಜ ಅಬ್ಬಾಸ್ ದಾರಿಮಿ, ಮಜೀದ್ ದಾರಿಮಿ ಘಟ್ಟಮನೆ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಖಾಸಿಂ ದಾರಿಮಿ ನಂದಾವರ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News