ಚೀನಾದಲ್ಲಿ ತೀವ್ರ ಉಷ್ಣಮಾರುತ ಕಾರ್ಖಾನೆಗಳನ್ನು ಮುಚ್ಚಲು ಸೂಚನೆ

Update: 2022-08-17 18:22 GMT

 ಬೀಜಿಂಗ್, ಆ.17: ಕಳೆದ 6 ದಶಕಗಳಲ್ಲೇ ಅತೀ ಹೆಚ್ಚಿನ ಉಷ್ಣಮಾರುತದಿಂದ ಕಂಗೆಟ್ಟಿರುವ ಚೀನಾದಲ್ಲಿ ಕಾರ್ಖಾನೆಗಳನ್ನು ಮುಚ್ಚಲಾಗಿದೆ . ಹಲವು ನಗರಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ತಲುಪಿದೆ ಎಂದು ವರದಿಯಾಗಿದೆ. ಸುಡುಬಿಲಿನಿಂದಾಗಿ ತಾಪಮಾನ ಗರಿಷ್ಟ ಮಟ್ಟಕ್ಕೇರಿರುವುದರಿಂದ ವಿದ್ಯುತ್ ಕೊರತೆಯನ್ನು ನಿವಾರಿಸಲು 6 ದಿನ ಎಲ್ಲಾ ಕೈಗಾರಿಕೆಗಳನ್ನು ಬಂದ್ ಮಾಡುವಂತೆ ಸಿಚುವಾನ್ ಪ್ರಾಂತದ ಅಧಿಕಾರಿಗಳು ಸೂಚಿಸಿದ್ದಾರೆ.

 ಸಿಚುವಾನ್ ಪ್ರಾಂತ ಸೋಲಾರ್ ಪ್ಯಾನೆಲ್ ಹಾಗೂ ಸೆಮಿಕಂಡಕ್ಟರ್‌ಗಳ ಉತ್ಪಾದನೆಯ ಪ್ರಮುಖ ತಾಣವಾಗಿದ್ದು ಇಲ್ಲಿ ಕೈಗಾರಿಕೆಗಳು ಬಂದ್ ಆದರೆ ಆಪಲ್, ಐಎನ್‌ಟಿಸಿ ಸೇರಿದಂತೆ ವಿಶ್ವದ ಬೃಹತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಗಳ ಕಾರ್ಯನಿರ್ವಹಣೆಗೆ ತೊಡಕಾಗಲಿದೆ ಎಂದು ಸಿಎನ್‌ಎನ್ ಸುದ್ಧಿಸಂಸ್ಥೆ ವರದಿ ಮಾಡಿದೆ.

ಇಲೆಕ್ಟ್ರಿಕ್ ವಾಹನಗಳ ಪ್ರಮುಖ ಭಾಗವಾಗಿರುವ ಲಿಥಿಯಂ ಲೋಹದ ಗಣಿಗಾರಿಕೆಗೂ ಈ ಪ್ರಾಂತ ಹೆಸರಾಗಿದೆ. ಗಣಿಗಾರಿಕೆ ಸ್ಥಗಿತಗೊಂಡರೆ ಇಲೆಕ್ಟ್ರಾನಿಕ್ ವಾಹನಗಳ ಉದ್ಯಮಕ್ಕೂ ಹಿನ್ನಡೆಯಾಗಲಿದೆ. 84 ಮಿಲಿಯನ್ ಜನಸಂಖ್ಯೆ ಇರುವ ಸಿಚುವಾನ್ ಪ್ರಾಂತದ 21 ನಗರಗಳಲ್ಲಿ 19 ನಗರಗಳಲ್ಲಿ ಕೈಗಾರಿಕೆಗಳನ್ನು ಸೋಮವಾರದಿಂದ ಶನಿವಾರದವರೆಗೆ ಮುಚ್ಚಲು ಸೂಚಿಸಲಾಗಿದೆ.

ಗರಿಷ್ಟ ತಾಪಮಾನದಿಂದ ಮನೆ ಮತ್ತು ಕಚೇರಿಗಳಲ್ಲಿ ಏರ್‌ಕಂಡಿಷನರ್ ಬಳಕೆ ಹೆಚ್ಚಿದ್ದು ಇದು ವಿದ್ಯುತ್ ಗ್ರಿಡ್‌ಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಜತೆಗೆ, ನದಿಗಳ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಜಲವಿದ್ಯುತ್ ಸ್ಥಾವರಗಳಿಗೂ ತೊಡಕಾಗಿದೆ. ಜಿಯಾಂಗ್ಸು, ಅನ್ಹುಯಿ, ಝೆಜಿಯಾಂಗ್ ಪ್ರಾಂತದಲ್ಲಿ ವಿದ್ಯುತ್ ಬಳಕೆ ಮಿತಗೊಳಿಸುವಂತೆ ನಿವಾಸಿಗಳಿಗೆ ಹಾಗೂ ಉದ್ಯಮಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಬಳಕೆ ಕಡಿಮೆಗೊಳಿಸಲು ಕಟ್ಟಡಗಳ ಪ್ರಥಮ 3 ಮಹಡಿಗಳಿಗೆ ಲಿಫ್ಟ್ ಸೌಲಭ್ಯ ಬಂದ್ ಮಾಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News