ಶಕ್ತಿನಗರ | ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಸೆ.4ರಂದು ‘ಹೇರ್ ಡೋನೇಶನ್ ಕ್ಯಾಂಪ್’

Update: 2022-08-18 10:15 GMT

ಮಂಗಳೂರು, ಆ.18: ಇಲ್ಲಿನ ಶಕ್ತಿನಗರದಲ್ಲಿರುವ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮುಳಿಯ ಫೌಂಡೇಶನ್ ಸಹಕಾರದೊಂದಿಗೆ ಸೆ.4ರಂದು ಪೂರ್ವಾಹ್ನ 10 ಗಂಟೆಯಿಂದ ಶಕ್ತಿ ಪಿಯು ಕಾಲೇಜಿನ ರೇಶ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ‘ಹೇರ್ ಡೋನೇಶನ್ ಕ್ಯಾಂಪ್’ ಆಯೋಜಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪಿಯಸಿ ವಿದ್ಯಾರ್ಥಿನಿ ಕನ್ಯಾ ಶೆಟ್ಟಿ, ಕಳೆದ ಮೂರು ವರ್ಷಗಳಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿ 300 ಮಂದಿಯಿಂದ ಕೂದಲನ್ನು ಪಡೆದು ಇದರಿಂದ 15 ವಿಗ್‌ಗಳನ್ನು ತಯಾರಿಸಿ ಕ್ಯಾನ್ಸರ್ ರೋಗದಿಂದ ಬಳಲಿದ ಮತ್ತು ಕಿಮೋ ಥೆರಪಿಯಿಂದ ಕೂದಲನ್ನು ಕಳಕೊಂಡವರಿಗೆ ವಿಗ್ ತಯಾರಿಸಿ ನೀಡಲಾಗಿದೆ. ಈ ಶಿಬಿರದಲ್ಲಿ ಕೂಡ ಹೆಚ್ಚಿನ ದಾನಿಗಳಿಂದ ಕೂದಲನ್ನು ನಿರೀಕ್ಷಿಸಲಾಗಿದೆ ಎಂದರು.

ದಾನಿಗಳು ತಮ್ಮ ಸ್ವಚ್ಛವಾದ ಕೂದಲನ್ನು ನೀಡಬೇಕು. 15 ಇಂಚಿಗಿಂತ ಹೆಚ್ಚು ಇರುವ ಕೂದಲನ್ನು ಮಾತ್ರ ಶಿಬಿರದಲ್ಲಿ ತೆಗೆದುಕೊಳ್ಳಲಾಗುವುದು. ಕೂದಲು ದಾನ ಮಾಡಲಿಚ್ಛಿಸುವ ದಾನಿಗಳು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಕ್ಯಾಂಪ್‌ನಲ್ಲಿ ಭಾಗವಹಿಸಬಹುದು. ಪ್ರಮಾಣ ಪತ್ರವನ್ನೂ ನೀಡಲಾಗುವುದು. ಒಂದು ವಿಗ್ ತಯಾರಿಸಲು ಸುಮಾರು 10 ಸಾವಿರದಷ್ಟು ವೆಚ್ಚು ತಗಲುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಭರಿಸುವುದು ಕಷ್ಟಸಾಧ್ಯ. ಆದ್ದರಿಂದ ಬರುವ ದಾನಿಗಳು ರೂ.150 ನೋಂದಣಿ ಶುಲ್ಕ ಪಾವತಿಸಿ ಭಾಗವಹಿಸಬೇಕು ಎಂದವರು ಹೇಳಿದರು.

ವಿದ್ಯಾರ್ಥಿನಿ ಆದ್ಯಾ ಸುಲೋಚನಾ ಮಾತನಾಡಿ, ದಾನಿಗಳು ವಿಗ್ ಜೊತೆಗೆ ದೇಣಿಗೆಯನ್ನೂ ನೀಡಬಹುದು. ಶಿಬಿರದಲ್ಲಿ ನುರಿತ ಬ್ಯೂಟಿ ಪಾರ್ಲರ್‌ನವರ ಸಹಾಯದಿಂದ ಹೇರ್ ಕಟ್‌ ಮಾಡಲಾಗುವುದು. ಕಲರ್ ಮಾಡಿದ ಕೂದಲನ್ನು ಕೂಡ ನೀಡಬಹುದಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಜ್ಞನ್ ಕೃಷ್ಣ, ಪ್ರದ್ಯುಮ್ನ ಡಿ. ರಾವ್, ಶ್ರೀಲತಾ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News