ಅಲ್ಜೀರಿಯಾದಲ್ಲಿ ಭೀಕರ ಕಾಡ್ಗಿಚ್ಚು: 38 ಮಂದಿ ಮೃತ್ಯು , 200ಕ್ಕೂ ಹೆಚ್ಚು ಮಂದಿಗೆ ಗಾಯ

Update: 2022-08-18 15:48 GMT

ಅಲ್ಜೀರ್ಸ್, ಆ.18: ಸುಡುಬಿಸಿಲು , ಅಧಿಕ ತಾಪಮಾನದಿಂದ ಅಲ್ಜೀರಿಯಾದಲ್ಲಿ ಸಂಭವಿಸಿರುವ ಭೀಕರ ಕಾಡ್ಗಿಚ್ಚಿನಿಂದ ಕನಿಷ್ಟ 38 ಮಂದಿ ಮೃತಪಟ್ಟಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಉತ್ತರ ಆಫ್ರಿಕಾ ದೇಶ ಅಲ್ಜೀರಿಯಾದಲ್ಲಿ ಕಾಡ್ಗಿಚ್ಚು ಪ್ರತೀ ವರ್ಷ ವ್ಯಾಪಕ ನಾಶ-ನಷ್ಟಕ್ಕೆ ಕಾರಣವಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆಯೂ ಸೇರಿ ಭೀಕರವಾಗಿ ಹರಡುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ರಕ್ಷಣಾ ಕಾರ್ಯಕರ್ತರು ಹಾಗೂ ಅಗ್ನಿಶಾಮಕ ಪಡೆ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಜೀರಿಯಾದ ಪೂರ್ವದಲ್ಲಿ, ಟ್ಯುನೀಷಿಯಾದೊಂದಿಗಿನ ಗಡಿಭಾಗದ ಪ್ರದೇಶದಲ್ಲಿ ತಾಪಮಾನ 48 ಡಿಗ್ರಿ ಸೆಲ್ಶಿಯಸ್ಗೆ ಏರಿರುವುದರಿಂದ ಅಲ್ಲಿ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ. ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡಾಗ 8 ಪ್ರಯಾಣಿಕರು ಜೀವಂತ ದಹನವಾಗಿದ್ದಾರೆ. ಹಲವರು ಸುಟ್ಟ ಗಾಯ ಮತ್ತು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈಶಾನ್ಯ ಪ್ರಾಂತದ ಎಲ್ಕಾಲ ನಗರದಲ್ಲಿ ಬೆಂಕಿಯ ಚಂಡಮಾರುತ ಎದುರಿಗೆ ಸಿಕ್ಕಿದ್ದನ್ನು ಕ್ಷಣ ಮಾತ್ರದಲ್ಲಿ ಧ್ವಂಸಮಾಡುತ್ತಾ ತ್ವರಿತವಾಗಿ ಮುನ್ನುಗ್ಗುತ್ತಿದೆ. ಇಲ್ಲಿರುವ ಅಭಯಾರಣ್ಯಕ್ಕೆ ಭೇಟಿ ನೀಡಿದ ಹಲವು ಪ್ರವಾಸಿಗರು ಬೆಂಕಿಗೆ ಸಿಲುಕಿದ್ದಾರೆ. ತೊಂಗಾ ಸರೋವರದ ಬಳಿ ವ್ಯಾಪಿಸಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಕಾರ್ಯಾಚರಣೆ ಮುಂದುವರಿದಿದೆ.

ಸೋಕ್ ಅಹರಾಸ್ ನಗರದಲ್ಲಿ ಬೆಂಕಿ ವ್ಯಾಪಿಸಿದ್ದು ಅರಣ್ಯದ ಬಳಿಯ ಆಸ್ಪತ್ರೆಯಲ್ಲಿದ್ದ ಸುಮಾರು 100 ಮಹಿಳೆಯರು ಹಾಗೂ 17 ನವಜಾತ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬೆಂಕಿಯಿಂದ ಸುಡುತ್ತಿರುವ ತಮ್ಮ ಮನೆಗಳಿಂದ ಜನತೆ ದಿಕ್ಕಾಪಾಲಾಗಿ ಓಡುತ್ತಿರುವ ವೀಡಿಯೊವನ್ನು ಅಲ್ಜೀರಿಯಾದ ಸರಕಾರಿ ಸ್ವಾಮ್ಯದ ಟಿವಿ ಪ್ರಸಾರ ಮಾಡಿದೆ. ಪ್ರಧಾನಿ ಅಯ್ಮಾನ್ ಬೆನಡೆರ್ಹಾಮ್ನೆ ಗುರುವಾರ ಬೆಳಿಗ್ಗೆ ಈ ಪ್ರದೇಶಕ್ಕೆ ಭೇಟಿ ನೀಡಿರುವುದಾಗಿ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News