ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರ್‌ಗೆ ದೇವರಾಜ ಅರಸು ಪ್ರಶಸ್ತಿ

Update: 2022-08-18 16:15 GMT
ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರ್‌

ಬೆಂಗಳೂರು, ಆ.18: ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಯರ್ ಸಂಬಂಧಿತ ಪ್ಯಾಲಿಯೇಟೀವ್ ವಿಭಾಗದಲ್ಲಿ ಬಡವರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಎಂ.ಅಣ್ಣಯ್ಯ ಕುಲಾಲ್ ಅವರಿಗೆ 2022ನೆ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ ಡಿ.ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆ.20ರಂದು ಆಯೋಜಿಸಲಾಗಿರುವ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ.ಎಂ.ಅಣ್ಣಯ್ಯ ಕುಲಾಲ್ ಅವರಿಗೆ ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಯು 5 ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ಶಿವಮೊಗ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗುರುಲಿಂಗಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರವು ರಚಿಸಿದ್ದ ಆಯ್ಕೆ ಸಮಿತಿಯು, ಪ್ರಶ್ತಸಿಗಾಗಿ ಡಾ.ಎಂ.ಅಣ್ಣಯ್ಯ ಕುಲಾಲ್ ಅವರನ್ನು ಆಯ್ಕೆ ಮಾಡಿದೆ.

ಅಣ್ಣಯ್ಯ ಕುಲಾಲ್ ಇವರು ಉಡುಪಿ ಜಿಲ್ಲೆಯ ಕೋಟ ಬಳಿಯ ತೆಕ್ಕಟ್ಟೆಯಲ್ಲಿ 1970ರ ಜೂ.1ರಂದು ಜನಿಸಿದರು.  ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉಳ್ತೂರು ಮತ್ತು ಕೆದೂರು ಗ್ರಾಮಗಳಲ್ಲಿ, ಬಿಎಸ್ಸಿ ಪದವಿಯನ್ನು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ, ಎಂ.ಬಿ.ಬಿ.ಎಸ್ ಪದವಿಯನ್ನು ಕಸ್ತೂರಿ ಬಾ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಎಂಬಿಎ ಪದವಿಯನ್ನು ಅಲಗಪ್ಪ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ.

ತಮ್ಮ ಪ್ರಾಥಮಿಕ ಮತ್ತು ಪದವಿ ವಿದ್ಯಾರ್ಥಿ ಜೀವನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಪಡೆದು, ತನ್ನ ಸಮಾಜಮುಖಿ, ಜಾತ್ಯತೀತ ಚಿಂತನೆಯಿಂದ ಬಡವರ, ನೊಂದವರ, ನಿರ್ಗತಿಕರಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಕರಾವಳಿ-ಮಲೆನಾಡು ಭಾಗವಲ್ಲದೇ ಇಡೀ ರಾಜ್ಯದಲ್ಲಿಯೇ ಉತ್ತಮ ವೈದ್ಯ ಹಾಗೂ ಸಮಾಜ ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದಾರೆ.

ಅಣ್ಣಯ್ಯ ಕುಲಾಲ್ ಅವರಿಗೆ ಡಾ.ಬಿ.ಸಿ.ರಾಯ್ ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಐಎಂಎ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ದೊರೆತಿವೆ. ಶ್ರೀನಿವಾಸ್ ಯೂನಿವರ್ಸಿಟಿ ಹಾಗೂ ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ಸರಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿತ ಪ್ಯಾಲಿಯೇಟೀವ್ ವಿಭಾಗದಲ್ಲಿ ಬಡವರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. 

ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ: 2022-23ನೇ ಸಾಲಿನಲ್ಲಿ ದೇವರಾಜ ಅರಸುರವರ ಜನ್ಮ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವಿಶಿಷ್ಟತೆಯಿಂದ 3 ದಿನಗಳ ಕಾಲ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಈ ಸಾಲಿನಲ್ಲಿ ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ಡಿ.ದೇವರಾಜ ಅರಸು ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಈ ಪ್ರಶಸ್ತಿಯು 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಅದರನ್ವಯ 2022-23ನೇ ಸಾಲಿನಲ್ಲಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸೂಕ್ತ ಮಾನದಂಡಗಳೊಂದಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮಗಳು: ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ಡಿ.ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಸಮಾರಂಭ. ದೇವರಾಜ ಅರಸುರವರ ಚಿಂತನೆಗಳ ಬಗ್ಗೆ ವಿಚಾರಗೋಷ್ಠಿ ಹಾಗೂ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿ ನಿಲಯಗಳ ಮಕ್ಕಳಿಗೆ ಯೋಗ ಹಾಗೂ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಸಮಾರಂಭವನ್ನು ಆಯೋಜಿಸಲಾಗಿದೆ.

ಆ.22 ರಂದು ಶಾಲಾ ಮಕ್ಕಳಿಗೆ ಅರಣ್ಯದ ಮಹತ್ವದ ಬಗ್ಗೆ ತಿಳುವಳಿಕೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ರೀತಿ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಛಾಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News