ಬಿಎಸ್‌ವೈಗೆ ಸ್ಥಾನ- ಆರೆಸ್ಸೆಸ್‌ಗೆ ತಿರುಗು ಬಾಣ?

Update: 2022-08-19 03:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ರಾಜಕೀಯದೊಳಗೆ ಪಕ್ಷಕ್ಕೆ ತಲೆನೋವಾಗುವವರನ್ನು ಕೆಲವೊಮ್ಮೆ ವರಿಷ್ಠರು ಬೆದರಿಕೆಯ ಮೂಲಕ ಮಣಿಸಲು ಮುಂದಾಗುತ್ತಾರೆ. ಇನ್ನು ಕೆಲವೊಮ್ಮೆ ಕೆಲವು ಸ್ಥಾನಗಳನ್ನು ನೀಡಿ ಅವರ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕುತ್ತಾರೆ. ನುಂಗಲೂ ಆಗದ, ಉಗುಳಲೂ ಆಗದ ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಲು ಬಿಜೆಪಿಯ ಕೇಂದ್ರ ವರಿಷ್ಠರು ಎರಡನೇ ತಂತ್ರವನ್ನು ಅನುಸರಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಬಿಜೆಪಿಯ ಸಂಸದೀಯ ಮಂಡಳಿಗೆ ಬಿ. ಎಸ್. ಯಡಿಯೂರಪ್ಪರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಸಂಸದೀಯ ಮಂಡಳಿಯು ಪಕ್ಷದ ಅತ್ಯುನ್ನತ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಂಡಳಿಯಾಗಿದ್ದು ಜೆ. ಪಿ. ನಡ್ಡಾ ಅಧ್ಯಕ್ಷರಾಗಿದ್ದಾರೆ. ಈ ಮಂಡಳಿಗೆ ಸೇರ್ಪಡೆಯಾಗುವ ಬಹುತೇಕ ನಾಯಕರ ಬೆನ್ನುಮೂಳೆಗಳನ್ನು ಮುರಿದು ಹಾಕಲಾಗುತ್ತದೆ. ಅಥವಾ ಅಂತಹದೊಂದು ಮೂಳೆ ಇಲ್ಲ ಎನ್ನುವುದನ್ನು ಖಾತರಿ ಪಡಿಸಿದ ಬಳಿಕವೇ ಮಂಡಳಿಗೆ ಸೇರ್ಪಡೆಗೊಳಿಸಲಾಗುತ್ತದೆ. ಆದುದರಿಂದಲೇ, ನಿತಿನ್ ಗಡ್ಕರಿ, ಆದಿತ್ಯನಾಥ್, ಚೌಹಾಣ್‌ರಂತಹ ಒಂದಿಷ್ಟು ವರ್ಚಸ್ಸಿರುವ ನಾಯಕರನ್ನು ಮಂಡಳಿಯಿಂದ ದೂರ ಇರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಿಂಭಡ್ತಿ ಪಡೆದು ಒಳಗೊಳಗೆ ಅಭದ್ರತೆ ಎದುರಿಸುತ್ತಿರುವ ಫಡ್ನವೀಸ್‌ರನ್ನು ಮಂಡಳಿಗೆ ಸೇರ್ಪಡೆಗೊಳಿಸಲಾಗಿದೆ. ದಿಲ್ಲಿಯ ವರಿಷ್ಠರ ನಿರ್ಧಾರಗಳ ಮುಂದೆ ಬಾಲ ಬಿಚ್ಚುವ ಶಕ್ತಿ, ಸ್ವಂತಿಕೆ ಫಡ್ನವೀಸ್ ಅಥವಾ ಯಡಿಯೂರಪ್ಪರಂತಹ ನಾಯಕರಿಗೆ ಇಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಬಿಜೆಪಿಯ ಅತ್ಯುನ್ನತ ನೀತಿ, ನಿರ್ಧಾರಗಳನ್ನು ಕೈಗೊಳ್ಳುವ ಅಧಿಕೃತ ಮಂಡಳಿ ಆರೆಸ್ಸೆಸ್. ಇಂದು ಆರೆಸ್ಸೆಸ್ ಬಿಜೆಪಿಯೊಳಗೆ ಮಾತ್ರವಲ್ಲ, ಸರಕಾರದೊಳಗೇ ನೇರ ಹಸ್ತಕ್ಷೇಪ ಮಾಡುತ್ತಿದೆ. ಬಿಜೆಪಿಯ ಸಂಸದೀಯ ಮಂಡಳಿಯ ಕೆಲಸವೆಂದರೆ, ಆರೆಸ್ಸೆಸ್‌ನ ನೀತಿ ನಿರ್ಧಾರಗಳನ್ನು ಪಕ್ಷದೊಳಗೆ ಜಾರಿಗೊಳಿಸುವುದು. ಆರೆಸ್ಸೆಸ್‌ನ್ನು ಪ್ರತಿರೋಧಿಸುವ ಯಾವ ಅವಕಾಶವೂ ಅವರಿಗಿಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು, ಯಾರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು, ಯಾವ ರೀತಿಯಲ್ಲಿ ತನ್ನ ಕಾನೂನು ಕಾಯ್ದೆಗಳ ಮೂಲಕ ಸಮಾಜವನ್ನು ಒಡೆಯಬೇಕು ಮೊದಲಾದ ಎಲ್ಲ ನಿರ್ಧಾರಗಳು ಆರೆಸ್ಸೆಸ್ ಮನೆಯಿಂದಲೇ ಹೊರಡುತ್ತದೆ. ಈ ಸಂಸದೀಯ ಮಂಡಳಿಯನ್ನು ಆರೆಸ್ಸೆಸ್ ತನ್ನ ಗುರಾಣಿಯಾಗಿ ಬಳಸಿಕೊಳ್ಳುತ್ತದೆ. ಯಡಿಯೂರಪ್ಪ ಅವರನ್ನು ಆರೆಸ್ಸೆಸ್ ಕರ್ನಾಟಕದಲ್ಲಿ ಹೇಗೆ ನಡೆಸಿಕೊಂಡಿತು ಎನ್ನುವುದು ಇತಿಹಾಸ. ಇಷ್ಟಾದರೂ ಯಡಿಯೂರಪ್ಪ ಅವರ ಬೆನ್ನ ಹಿಂದಿರುವ ಲಿಂಗಾಯತ ಲಾಬಿ ಆರೆಸ್ಸೆಸ್‌ಗೆ ಬಹುದೊಡ್ಡ ಸಮಸ್ಯೆಯಾಗಿದೆ. ಕರ್ನಾಟಕ ರಾಜ್ಯ ರಾಜಕೀಯದೊಳಗೆ ಯಡಿಯೂರಪ್ಪ ಇರುವವರೆಗೆ ಇಲ್ಲಿ ಆರೆಸ್ಸೆಸ್ ತನ್ನ ಬಾಲ ಬಿಚ್ಚುವುದಕ್ಕಾಗುವುದಿಲ್ಲ.

ತನ್ನ ಲಿಂಗಾಯತ ಶಕ್ತಿಯ ಜೊತೆಗೆ ಯಡಿಯೂರಪ್ಪ ಸಿಡಿದದ್ದೇ ಆದರೆ, ಹಿಂದುತ್ವ ಎನ್ನುವ ಗುಳ್ಳೆ ಒಡೆದು ಹೋಗುತ್ತದೆ ಎನ್ನುವ ಭಯ ಆರೆಸ್ಸೆಸ್‌ಗಿದೆ. ಆದುದರಿಂದ, ನಯ ನಾಜೂಕಿನಿಂದ ಯಡಿಯೂರಪ್ಪರನ್ನು ರಾಜ್ಯ ರಾಜಕೀಯದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗಷ್ಟೇ ಯಡಿಯೂರಪ್ಪ ಅವರು ‘ರಾಜಕೀಯದಿಂದ ನಿವೃತ್ತಿ ಘೋಷಣೆ’ಯ ಮಾತುಗಳನ್ನಾಡಿದ್ದರು. ಇದೇ ಸಂದರ್ಭದಲ್ಲಿ ‘ಶಿಕಾರಿ ಪುರ ಅಭ್ಯರ್ಥಿಯಾಗಿ ತನ್ನ ಪುತ್ರನ ಹೆಸರನ್ನು’ ಘೋಷಿಸಿದ್ದರು. ಅಂದರೆ ಪುತ್ರನನ್ನು ಮುಂದಿಟ್ಟುಕೊಂಡು ಮುಂದಿನ ರಾಜಕೀಯ ನಡೆಸಲಿದ್ದೇನೆ ಎನ್ನುವ ಸೂಚನೆಯನ್ನು ರಾಜ್ಯ ವರಿಷ್ಠರಿಗೆ ಮುಖ್ಯವಾಗಿ ಆರೆಸ್ಸೆಸ್‌ನ ಸಂತೋಷ್ ಮತ್ತು ಇನ್ನಿತರರಿಗೆ ನೀಡಿದ್ದರು. ಇದು ಬಿಜೆಪಿಗೆ ತೀವ್ರ ಇರಿಸುಮುರಿಸು ಸೃಷ್ಟಿಸಿತ್ತು. ಶಿಕಾರಿಪುರ ಅಭ್ಯರ್ಥಿಯನ್ನು ಘೋಷಿಸುವ ಅಧಿಕಾರ ವರಿಷ್ಠರಿಗೆ ಮಾತ್ರ ಇದೆ ಎಂದು ಹಲವು ಬಿಜೆಪಿ ಮುಖಂಡರು ತಕ್ಷಣ ಸ್ಪಷ್ಟೀಕರಣ ನೀಡಿದ್ದರು. ಬಳಿಕ ಯಡಿಯೂರಪ್ಪ ಮಾಧ್ಯಮಗಳ ಮೂಲಕ ತನ್ನ ಹೇಳಿಕೆಯಿಂದ ಹಿಂದೆ ಸರಿದರು. ಆದರೂ ಬಿಜೆಪಿಯೊಳಗೆ ‘ಕೆಜೆಪಿ’ ಇನ್ನೂ ಜೀವಂತವಿದೆ ಎನ್ನುವ ಎಚ್ಚರಿಕೆಯನ್ನು ಅದಾಗಲೇ ರಾಜ್ಯದ ಆರೆಸ್ಸೆಸ್ ವರಿಷ್ಠರಿಗೆ ರವಾನಿಸಿದ್ದರು. ಯಡಿಯೂರಪ್ಪರನ್ನು ಕೇಂದ್ರದ ವರಿಷ್ಠರ ಮೂಲಕ ಬಾಯಿ ಮುಚ್ಚಿಸುವುದು ಕಷ್ಟವೆನ್ನುವುದು ಆರೆಸ್ಸೆಸ್‌ಗೆ ಚೆನ್ನಾಗಿಯೇ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿಯ ಚುಕ್ಕಾಣಿ ಕೈವಶ ಮಾಡಲು ವೈದಿಕ ಮತ್ತು ಲಿಂಗಾಯತ ಲಾಬಿಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ.

ವೈದಿಕ ಲಾಬಿಯ ನೇತೃತ್ವವನ್ನು ಆರೆಸ್ಸೆಸ್ ವಹಿಸಿಕೊಂಡಿದೆ. ಇತರ ಶೂದ್ರ ನಾಯಕರನ್ನು ಮುಂದೆ ಬಿಟ್ಟು ಅದು ರಾಜಕೀಯ ತಂತ್ರಗಾರಿಕೆಗಳನ್ನು ಮಾಡುತ್ತಿದೆ. ಯಡಿಯೂರಪ್ಪ ಲಿಂಗಾಯತ ಮಠಗಳು ಮತ್ತು ಸ್ವಾಮೀಜಿಗಳನ್ನು ಬಲವಾಗಿ ನೆಚ್ಚಿಕೊಂಡಿದ್ದಾರೆ. ಯಡಿಯೂರಪ್ಪ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೂ, ಅದು ಲಿಂಗಾಯತರನ್ನು ಕೆರಳಿಸಬಹುದು. ಅವರ ಆಕ್ರೋಶ ಆರೆಸ್ಸೆಸ್‌ಗೆ ದುಬಾರಿಯಾಗಿ ಪರಿಣಮಿಸಬಹುದು ಎನ್ನುವ ಭಯದಿಂದ, ಇದೀಗ ‘ರಾಜ್ಯ ರಾಜಕೀಯ ಸಾಕು. ನಿಮಗೆ ರಾಷ್ಟ್ರ ರಾಜಕೀಯಕ್ಕೆ ಭಡ್ತಿ ನೀಡಿದ್ದೇವೆ’ ಎಂದು ಯಡಿಯೂರಪ್ಪರನ್ನು ವರಿಷ್ಠರು ದಿಲ್ಲಿಗೆ ಕರೆಸಿಕೊಂಡಿದ್ದಾರೆ. ಆದರೆ ಆರೆಸ್ಸೆಸ್‌ನ ತಂತ್ರಗಾರಿಕೆಯನ್ನು ಅರಿಯದಷ್ಟು ಮುಗ್ಧರೇನೂ ಯಡಿಯೂರಪ್ಪ ಅವರಲ್ಲ. ತನ್ನ ವರ್ಚಸ್ಸನ್ನು ಬಲಿಕೊಟ್ಟು, ತನ್ನ ನೇತೃತ್ವದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸಿ, ಆರೆಸ್ಸೆಸ್‌ನ ಬಿ. ಸಂತೋಷ್ ಅಥವಾ ಇನ್ನಾರನ್ನೋ ಮುಖ್ಯಮಂತ್ರಿ ಮಾಡಿ ಕೂರಿಸುವಷ್ಟು ದಡ್ಡರೂ ಅವರಲ್ಲ. ತನ್ನನ್ನು ಬಳಸಿ ಎಸೆಯುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ ಎನ್ನುವುದು ಅವರಿಗೂ ಸ್ಪಷ್ಟವಿದೆ. ಮುಂದಿನ ಚುನಾವಣೆಯಲ್ಲಿ ತನ್ನ ನೇತೃತ್ವದಲ್ಲಿ ಚುನಾವಣೆ ನಡೆಯುವುದೇ ಆಗಿದ್ದರೆ ಮುಖ್ಯಮಂತ್ರಿಯೂ ಅವರ ಅಭ್ಯರ್ಥಿಯೇ ಆಗಿರುತ್ತಾನೆ. ಅಥವಾ ಕನಿಷ್ಠ ತನ್ನ ಪುತ್ರನಿಗೆ ಯೋಗ್ಯ ಸ್ಥಾನಮಾನದ ಭರವಸೆಯನ್ನು ಪಡೆದುಕೊಳ್ಳದೆ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದಕ್ಕೆ ಅವರು ಮುಂದಾಗಲಾರರು.

ಲಿಂಗಾಯತ ಮಠಗಳು ಮತ್ತು ಸ್ವಾಮೀಜಿಗಳು ಕೂಡ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸ್ವತಂತ್ರ ಲಿಂಗಾಯತ ಧರ್ಮ ಚಳವಳಿ ಸದ್ಯಕ್ಕೆ ತಣ್ಣಗಾಗಿರಬಹುದು. ಆದರೆ ಅದು ಬೂದಿ ಮುಚ್ಚಿದ ಕೆಂಡದಂತಿದೆ. ಲಿಂಗಾಯತ ಧರ್ಮದ ಮೂಲಸತ್ವಗಳನ್ನು ತಿರುಚಿ ವೈದಿಕ ಸ್ವಾಮೀಜಿಗಳು ಮತ್ತು ಮಠಗಳು ಲಿಂಗಾಯತ ಧರ್ಮವನ್ನು ನಿಯಂತ್ರಿಸಲು ಯತ್ನಿಸುತ್ತಿರುವುದು ಒಳಗೊಳಗೆ ಚರ್ಚೆಯಲ್ಲಿದೆ. ಯಡಿಯೂರಪ್ಪ ಅವರ ಕೈಯಲ್ಲಿ ಬಿಜೆಪಿ ನಾಯಕತ್ವವಿರುವುದು, ಈವರೆಗೆ ಅದನ್ನು ಸಹಿಸಿಕೊಳ್ಳಲು ಮುಖ್ಯ ಕಾರಣವಾಗಿತ್ತು. ಲಿಂಗಾಯತ ನಾಯಕರಿಗೆ ಹಿನ್ನಡೆಯಾಗಿ, ಬಿಜೆಪಿಯ ರಾಜ್ಯ ಚುಕ್ಕಾಣಿ ವೈದಿಕ ಶಕ್ತಿಗಳ ಕೈವಶವಾದರೆ, ಅದು ಲಿಂಗಾಯತ ಧರ್ಮದ ಮೇಲೂ ಪೂರ್ಣ ಪ್ರಭಾವ ಬೀರಲಿದ್ದು, ಹಿಂದುತ್ವ ಲಿಂಗಾಯತ ತತ್ವ ಚಿಂತನೆಗಳನ್ನು ಆಪೋಷನ ತೆಗೆದುಕೊಳ್ಳಬಹುದು ಎನ್ನುವ ಆತಂಕ ಸ್ವಾಮೀಜಿಗಳಲ್ಲಿದೆ. ಈ ನಿಟ್ಟಿನಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಲಿಂಗಾಯತ ಸ್ವಾಮೀಜಿಗಳು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಯಡಿಯೂರಪ್ಪ ಅವರು ಅದನ್ನೇ ತನ್ನ ಶಕ್ತಿಯಾಗಿ ಬಳಸಿಕೊಂಡು ಮುಂದಿನ ರಾಜಕೀಯ ಹೆಜ್ಜೆಗಳನ್ನು ಇಡಲಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿರಬಹುದು. ಆದರೆ ಬಿಜೆಪಿಯೊಳಗೆ ಅವರಿಗಾಗಿರುವ ಅನ್ಯಾಯ, ದ್ರೋಹ, ಆ ದ್ರೋಹಗಳ ಹಿಂದಿದ್ದ ಆರೆಸ್ಸೆಸ್‌ನ ಕುರಿತಂತೆ ಅವರೊಳಗೆ ಆಕ್ರೋಶ ಇನ್ನೂ ತಣ್ಣಗಾದಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News