ಮಂಗಳೂರು; ಉದ್ಯೋಗ ವಂಚನೆ ಪ್ರಕರಣ: ಆರೋಪಿ ರಾಮ್ ಪ್ರಸಾದ್ ಬಂಧನ
ಮಂಗಳೂರು: ಸರಕಾರಿ ಸಂಸ್ಥೆಯಾದ ಕೆಎಂಎಫ್ ಡೇರಿಯಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ 1.48 ಕೋ.ರೂ.ಗೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಪ್ರಸ್ತುತ ಮೂಡುಬಿದಿರೆ ತಾಲೂಕಿನ ಮಾಸ್ತಿಕಟ್ಟೆಯ ವಿವೇಕ ನಗರ ನಿವಾಸಿ ರಾಮ ಪ್ರಸಾದ್ ರಾವ್ ಪಿ. (37) ಬಂಧಿತ ಆರೋಪಿ.
ಈತ ಹರೀಶ್, ಕೇಶವ, ಶಶಿಧರ ಇತ್ಯಾದಿ ಹೆಸರಿನಲ್ಲೂ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫರಂಗಿಪೇಟೆ ಸಮೀಪದ ವಳಚ್ಚಿಲ್ ಪದವಿನ ದೇವಿಪ್ರಸಾದ್ ಪಿಯುಸಿಯ ಬಳಿಕ ಉದ್ಯೋಗದ ಹುಡುಕಾಟ ದಲ್ಲಿದ್ದರು. ಈ ಸಂದರ್ಭ ದೇವಿಪ್ರಸಾದ್‌ರ ಸ್ನೇಹಿತ ಪ್ರೀತೇಶ್ ಕುಮಾರ್ ಎಂಬಾತ ಕೆಎಂಎಫ್ ಡೇರಿಯಲ್ಲಿ ಉದ್ಯೋಗವಿದ್ದು, ಹಣ ನೀಡಿದರೆ ಉದ್ಯೋಗ ದೊರೆಯುತ್ತದೆ. ಪಡೀಲ್ ನಿವಾಸಿ, ಕೆಎಂಎಫ್ ಉದ್ಯೋಗಿ ಚಂದ್ರಾವತಿ ಮೂಲಕ ಹಣ ನೀಡಬೇಕು ಎಂದು ತಿಳಿಸಿದ್ದ ಎನ್ನಲಾಗಿದೆ. ಇದನ್ನು ನಂಬಿದ ದೇವಿಪ್ರಸಾದ್ ಅವರು ಚಂದ್ರಾವತಿಯನ್ನು ಸಂಪರ್ಕಿಸಿದ್ದು, ಆಕೆ ‘ಉದ್ಯೋಗ ನೀಡಲು 1.80 ಲಕ್ಷ ರೂ. ನೀಡಬೇಕು. ಈ ಮೊತ್ತದಲ್ಲಿ 80 ಸಾವಿರ ರೂ. ತುರ್ತಾಗಿ ನೀಡಬೇಕು’ ಎಂದಿದ್ದಳು. ಅದರಂತೆ ದೇವಿಪ್ರಸಾದ್ ಅವರು ಚಂದ್ರಾವತಿಗೆ ಹಣ ಪಾವತಿಸಿದ್ದರು. ಅದಕ್ಕೆ ಪ್ರತಿಯಾಗಿ ಚಂದ್ರಾವತಿಯು ದೇವಿಪ್ರಸಾದ್‌ಗೆ ಕ್ಲರ್ಕ್ ನೇಮಕಾತಿ ಆದೇಶ(ನಕಲಿ) ನೀಡಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
2021ರ ಡಿ.15ರಂದು ರಾಮಪ್ರಸಾದ್ ರಾವ್ ಎಂಬಾತ ಮಂಗಳೂರಿನ ಚಿಲಿಂಬಿಯ ಹಾಲ್‌ವೊಂದರಲ್ಲಿ ಸುಮಾರು 38 ಮಂದಿಗೆ ‘ಕೆಎಂಎಫ್ ಉದ್ಯೋಗ ತರಬೇತಿ’ ಆಯೋಜಿಸಿದ್ದ. ರಾಮ್‌ಪ್ರಸಾದ್, ಮೂಡಿಗೆರೆಯ ಡಾ.ಹೇಮಂತ್, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್ ಎಂಬವರು ತರಬೇತಿ ನೀಡಿದ್ದರು. ತರಬೇತಿಯಲ್ಲಿ ದೇವಿಪ್ರಸಾದ್ ಹಾಗೂ ಇತರ 37 ಮಂದಿ ಪಾಲ್ಗೊಂಡಿದ್ದರು. ರಾಮ್‌ಪ್ರಸಾದ್ ತಾನು ‘ಕೆಎಂಎಫ್‌ನ ಡೈರೆಕ್ಟರ್ ಹರೀಶ್ ಕೆ.’ ಎಂಬುದಾಗಿ ಪರಿಚಯಿಸಿಕೊಂಡು ವಿಸಿಟಿಂಗ್ ಕಾರ್ಡ್ ನೀಡಿದ್ದ ಎಂದು ದೇವಿಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ.
ಉದ್ಯೋಗ ನೇಮಕಾತಿ ಆದೇಶದ ಪ್ರತಿಯನ್ನು ಪಡೆದ ವಿಚಾರವನ್ನು ದೇವಿಪ್ರಸಾದ್ 2022ರ ಜನವರಿಯಲ್ಲಿ ಸ್ನೇಹಿತರಾದ ಅಶ್ವಿನಿ ಮತ್ತು ದೀಕ್ಷಿತ್‌ಗೆ ತಿಳಿಸಿದ್ದರು. ಅವರು ಕೂಡ ತಮ್ಮನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದರು. ಇದನ್ನು ದೇವಿಪ್ರಸಾದ್ ಕೆಎಂಎಫ್ ಉದ್ಯೋಗಿ ಚಂದ್ರಾವತಿಗೆ ತಿಳಿಸಿದಾಗ ಅಸಿಸ್ಟೆಂಟ್ ಎಚ್‌ಆರ್ ಉದ್ಯೋಗಕ್ಕೆ ಅಶ್ವಿನಿ 2.60 ಲ.ರೂ. ಮತ್ತು ಕ್ಲರ್ಕ್ ಉದ್ಯೋಗಕ್ಕೆ ದೀಕ್ಷಿತ್ 90 ಸಾವಿರ ರೂ. ನೀಡುವಂತೆ ಸೂಚಿಸಿದ್ದಳು. ಅದರಂತೆ ಇಬ್ಬರೂ ಚಂದ್ರಾವತಿಗೆ ಹಣ ಪಾವತಿಸಿದ್ದರು.
2022ರ ಮಾರ್ಚ್‌ನಲ್ಲಿ ದೇವಿಪ್ರಸಾದ್ ಬಳಿ ಚಂದ್ರಾವತಿಯು ‘ಕೆಎಂಎಫ್‌ನಲ್ಲಿ 3 ಅಫೀಸರ್ ಉದ್ಯೋಗವಿದೆ’ ಎಂದು ತಿಳಿಸಿದರು. ಅದನ್ನು ದೇವಿಪ್ರಸಾದ್ ತನ್ನ ಪರಿಚಯಸ್ಥರ ಬಳಿ ಹೇಳಿದ ಮೇರೆಗೆ ಭವ್ಯಾ ಕೆ., ಧನ್ಯಶ್ರೀ ಮತ್ತು ಯಕ್ಷಿತ್ ಉದ್ಯೋಗಕ್ಕೆ ಸೇರಲು ಮುಂದಾಗಿ ತಲಾ 3.50 ಲಕ್ಷ ರೂ.ವನ್ನು ಚಂದ್ರಾವತಿಗೆ ನೀಡಿದ್ದರು. ಈ ಪೈಕಿ ಅಶ್ವಿನಿಗೆ ನೇಮಕಾತಿ ಆದೇಶ ನೀಡಲಾಗಿತ್ತು ಎಂದು ದೇವಿಪ್ರಸಾದ್ ತಿಳಿಸಿದ್ದಾರೆ.
2022ರ ಮೇ ತಿಂಗಳವರೆಗೂ ನೇಮಕಾತಿ ಆಗದಿದ್ದಾಗ ದೇವಿಪ್ರಸಾದ್ ಮತ್ತಿತರರು ಚಂದ್ರಾವತಿಗೆ ಕರೆ ಮಾಡಿದ್ದರು. ಆಕೆ ಆ ವಿಚಾರವನ್ನು ರಾಮಪ್ರಸಾದ್‌ಗೆ ತಿಳಿಸಿದ್ದಳು. ಈ ವೇಳೆ ರಾಮಪ್ರಸಾದ್ ‘ನಿಮ್ಮ ಹಣಕ್ಕೆ ನಾನು ಜವಾಬ್ದಾರಿ’ ಎಂದಿದ್ದ. ಕೆಲವು ದಿನಗಳ ಬಳಿಕವೂ ನೇಮಕಾತಿ ಆಗದಿದ್ದಾಗ ದೇವಿಪ್ರಸಾದ್ ಮತ್ತಿತರರು ಹಣ ವಾಪಸ್ ನೀಡುವಂತೆ ಚಂದ್ರಾವತಿಯನ್ನು ಒತ್ತಾಯಿಸಿದರು.
2022ರ ಮೇ 4ರಂದು ಚಂದ್ರಾವತಿ 10.70 ಲ.ರೂ. ಮೊತ್ತದ ಚೆಕ್‌ನ್ನು ನೀಡಿದ್ದಳು. ಅದು 2022ರ ಮೇ 5ರಂದು ಅದು ಕ್ಲಿಯರೆನ್ಸ್ ಆಗಿತ್ತು ಎಂದು ದೇವಿಪ್ರಸಾದ್ ಸೆನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚಂದ್ರಾವತಿ ಹಣ ವಾಪಸ್ ನೀಡಿದ ಅನಂತರ ದೇವಿಪ್ರಸಾದ್‌ಗೆ ಮತ್ತೆ ಕರೆ ಮಾಡಿದ ರಾಮ್‌ಪ್ರಸಾದ್ ರಾವ್ ‘ಚಂದ್ರಾವತಿ ನೀಡಿದ ಹಣದ ಪೈಕಿ 1 ಲಕ್ಷ ರೂ ನನ್ನ ಖಾತೆಗೆ ಹಾಕಬೇಕು. ಕೂಡಲೇ ಉದ್ಯೋಗ ಕೊಡಿಸುತ್ತೇನೆ’ ಎಂದಿದ್ದ. ಇದನ್ನು ನಂಬಿದ ದೇವಿಪ್ರಸಾದ್ 1 ಲಕ್ಷ ರೂ.ನ್ನು ರಾಮಪ್ರಸಾದ್‌ಗೆ ನೀಡಿದರು. ಬಳಿಕ ರಾಮಪ್ರಸಾದ್ ಮತ್ತೆ 50 ಸಾವಿರ ರೂ.ಗೆ ಬೇಡಿಕೆ ಮುಂದಿಟ್ಟ. ಅದನ್ನು ಕೂಡ ದೇವಿಪ್ರಸಾದ್ ನೀಡಿದರು. ಆದರೂ ಉದ್ಯೋಗ ನೀಡಲಿಲ್ಲ. ಇದೇ ರೀತಿ ಭವ್ಯಾ, ಧನ್ಯಶ್ರೀ, ಅಶ್ವಿನಿ, ದೀಕ್ಷಿತ್, ಯಕ್ಷಿತ್‌ರಿಂದ ಆರೋಪಿ ರಾಮಪ್ರಸಾದ್ ರಾವ್ 14 ಲಕ್ಷ ರೂ. ಪಡೆದಿದ್ದ ಎಂದು ಆರೋಪಿಸಲಾಗಿದೆ.
ರಾಮಪ್ರಸಾದ್ ಸುಮಾರು 138ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳಿಂದ ಚಂದ್ರಾವತಿ ಮತ್ತು ಪುತ್ತೂರಿನ ರಮೇಶ್ ಮೂಲಕ 1.80 ಕೋ.ರೂ.ಗೂ ಅಧಿಕ ಹಣ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಂಚನೆಯ ಬಗ್ಗೆ ದೇವಿಪ್ರಸಾದ್ ನೀಡಿದ ದೂರಿನಂತೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿ ರಾಮಪ್ರಸಾದ್ ರಾವ್ ತರಬೇತಿ ನೀಡಿದ್ದಾರೆನ್ನಲಾದ ಮೂಡಿಗೆರೆಯ ಹೇಮಂತ್, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್ ಮತ್ತಿತರನ್ನು ಕೂಡ ಆರೋಪಿಗಳೆಂದು ಗುರುತಿಸಲಾಗಿದೆ.
ಈ ಪೈಕಿ ರಾಮಪ್ರಸಾದ್ ರಾವ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ನಕಲಿ ನೇಮಕಾತಿ ಆದೇಶ, ಐಡಿ ಕಾರ್ಡ್
ಪ್ರಮುಖ ಆರೋಪಿ ರಾಮಪ್ರಸಾದ್ ರಾವ್ ಯಾನೆ ಹರೀಶ್ ಮತ್ತಿತರರು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಕೆಎಂಎಫ್ ಡೇರಿ ಸರಕಾರಿ ಸಂಸ್ಥೆಯ ನಕಲಿ ಉದ್ಯೋಗ ನೇಮಕಾತಿ ಪತ್ರ, ಕೆಎಂಎಫ್‌ನ ನಕಲಿ ಐಡಿ ಕಾರ್ಡ್ ನೀಡಿದ್ದರು ಎಂದು ತಿಳಿದು ಬಂದಿದೆ. ವಂಚನೆಗೊಳಗಾದ ದೇವಿಪ್ರಸಾದ್ ಕೆಎಂಎಫ್ ಉದ್ಯೋಗಿ ಎನ್ನಲಾದ ಚಂದ್ರಾವತಿಯ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದರೂ ಎಫ್‌ಐಆರ್‌ನಲ್ಲಿ ಆಕೆಯ ಹೆಸರ ಉಲ್ಲೇಖವಾಗದಿರುವ ಬಗ್ಗೆ ಅಚ್ಚರಿ ವ್ಯಕ್ತವಾಗಿದೆ ಎಂದು ಉದ್ಯೋಗಾಕಾಂಕ್ಷಿಗಳು ತಿಳಿಸಿದ್ದಾರೆ.
ನಮಗೆ ಸಂಬಂಧವಿಲ್ಲ: ಸಹಕಾರಿ ಹಾಲು ಒಕ್ಕೂಟ
ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಲ್ಲಿ ಉದ್ಯೋಗ ನೇಮಕಾತಿ ಮಾಡಿಕೊಡುವ ಸಂಬಂಧ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿರುವ ಪ್ರಕರರಣಕ್ಕೂ ಹಾಲು ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿದೇರ್ಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣವು ಬಾಹ್ಯ ವ್ಯಕ್ತಿಗಳಿಂದ ನಡೆದಿದ್ದು, ಇದರಿಂದ ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆಯಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿದೇರ್ಶಕರು ತಿಳಿಸಿದ್ದಾರೆ.