ನನ್ನಷ್ಟೇ ಹಕ್ಕುಗಳು ನಿಮಗೂ ಇವೆ: ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಹಿಂದೂಗಳೊಂದಿಗೆ ಬಾಂಗ್ಲಾ ಪ್ರಧಾನಿ ಹಸೀನಾ ಮಾತುಕತೆ

Update: 2022-08-19 16:40 GMT

ಢಾಕಾ (ಬಾಂಗ್ಲಾದೇಶ), ಆ. 19: ಬಾಂಗ್ಲಾದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನಾನು ಹೊಂದಿರುವಷ್ಟೇ ಹಕ್ಕುಗಳಿವೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿರುವ ಮಂಟಪಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಮಂಟಪಗಳು ಢಾಕಾದಲ್ಲಿರುತ್ತವೆ ಎಂದು ಅವರು ಬಣ್ಣಿಸಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಗುರುವಾರ ಶೇಖ್ ಹಸೀನಾ ಹಿಂದೂ ಸಮುದಾಯದ ನಾಯಕರೊಂದಿಗೆ ಸಂವಹನ ನಡೆಸಿದರು. ನೀವು ಅಲ್ಪಸಂಖ್ಯಾತರು ಎಂಬುದಾಗಿ ಭಾವಿಸುವ ಅಗತ್ಯವಿಲ್ಲ ಎಂಬುದಾಗಿ ಅವರು ಇತರ ಧರ್ಮಿಯರಿಗೆ ಹೇಳಿದರು. ಧರ್ಮ ಯಾವುದೇ ಇದ್ದರೂ ಬಾಂಗ್ಲಾದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ ಎಂದರು.

‘‘ಎಲ್ಲ ಧರ್ಮಗಳ ಜನರು ಸಮಾನ ಹಕ್ಕುಗಳೊಂದಿಗೆ ಬದುಕಬೇಕು ಎಂದು ನಾವು ಬಯಸುತ್ತೇವೆ. ನೀವು ಈ ದೇಶದ ಜನರು, ನಿಮಗೆ ಇಲ್ಲಿ ಸಮಾನ ಹಕ್ಕುಗಳಿವೆ. ನನಗೆ ಯಾವ ಹಕ್ಕುಗಳಿವೆಯೋ ಆ ಎಲ್ಲಾ ಹಕ್ಕುಗಳು ನಿಮಗೂ ಇವೆ’’ ಎಂದು ಶೇಖ್ ಹಸೀನಾ ಹೇಳಿರುವುದಾಗಿ ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

‘‘ನಾವು ಈ ದೇಶದ ನಾಗರಿಕರು ಎಂಬುದಾಗಿ ನೀವು ಯಾವತ್ತೂ ತಿಳಿಯಬೇಕು. ನಿಮಗೆ ಸಮಾನ ಹಕ್ಕುಗಳಿವೆ’’ ಎಂದು ಬಾಂಗ್ಲಾದೇಶದ ಪ್ರಧಾನಿ ಹೇಳಿದರು. ಢಾಕಾದಲ್ಲಿರುವ ಢಾಕೇಶ್ವರಿ ಮಂದಿರ ಮತ್ತು ಛಟ್ಟೋಗ್ರಾಮ್ನಲ್ಲಿರುವ ಜೆ.ಎಮ್. ಸೇನ್ ಹಾಲ್ನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶೇಖ್ ಹಸೀನಾ ಗೊನೊ ಭವನ್ನಲ್ಲಿರುವ ತನ್ನ ಅಧಿಕೃತ ನಿವಾಸದಿಂದ ಆನ್ಲೈನ್ ಮೂಲಕ ಭಾಗವಹಿಸಿದರು.

‘‘ನಿಮ್ಮನ್ನು ನೀವು ಕೀಳಾಗಿ ಪರಿಗಣಿಸಬೇಡಿ. ನೀವು ಈ ದೇಶದಲ್ಲಿ ಹುಟ್ಟಿದ್ದೀರಿ. ನೀವು ಈ ದೇಶದ ನಾಗರಿಕರು’’ ಎಂದರು.

‘‘ಯಾವಾಗಲಾದರೂ ಅಹಿತಕರ ಘಟನೆಗಳು ನಡೆದರೆ, ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯಕ್ಕೆ ಯಾವುದೇ ಹಕ್ಕುಗಳಿಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅದು ದುರದೃಷ್ಟಕರ. ಅಂಥ ಘಟನೆಗಳಿಗೆ ಬೇರೆಯದೇ ಬಣ್ಣಗಳನ್ನು ನೀಡಲಾಗುತ್ತಿದೆ. ಅಂಥ ಘಟನೆಗಳ ಬಳಿಕ ಸರಕಾರ ತೆಗೆದುಕೊಳ್ಳುವ ಕ್ರಮಗಳು ಸುದ್ದಿಯಾಗುವುದಿಲ್ಲ’’ ಎಂದು ಶೇಖ್ ಹಸೀನಾ ಹೇಳಿರುವುದಾಗಿ ‘ಪ್ರೊಥಮ್ ಆಲೊ’ ಪತ್ರಿಕೆ ವರದಿ ಮಾಡಿದೆ.

ಹಿಂದೂ ಸಮುದಾಯವು ಬಾಂಗ್ಲಾದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯವಾಗಿದೆ. 2022ರ ಜನಗಣತಿಯ ಪ್ರಕಾರ, ದೇಶದ 16.15 ಕೋಟಿ ಜನಸಂಖ್ಯೆಯ ಸುಮಾರು 7.95% ಹಿಂದೂಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News