ಕಡಬ: ಅನಾರೋಗ್ಯಕ್ಕೀಡಾದ ವೃದ್ಧೆಯನ್ನು ಮರದ ಬಡಿಗೆಗೆ ಬಟ್ಟೆ ಕಟ್ಟಿ 2 ಕಿ.ಮೀ. ಹೊತ್ತೊಯ್ದರು
ಕಡಬ, ಆ.20: ಅನಾರೋಗ್ಯಕ್ಕೀಡಾದ ವೃದ್ಧೆಯೊಬ್ಬರನ್ನು ಸಮರ್ಪಕವಾದ ರಸ್ತೆಯಿಲ್ಲದ ಕಾರಣ ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಎರಡು ಕಿಲೋಮೀಟರ್ ಹೊತ್ತೊಯ್ದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಚಿವ ಎಸ್.ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಇಲ್ಲಿ ಕಚ್ಚಾ ರಸ್ತೆಯಿದ್ದರೂ ಅದು ವಾಹನ ಓಡಾಟಕ್ಕೆ ಸೂಕ್ತವಾಗಿಲ್ಲ. ಆದ್ದರಿಂದ ಕಾಲು ನೋವಿನಿಂದ ಬಳಲುತ್ತಿರುವ ಎಪ್ಪತ್ತು ವರ್ಷದ ಮಹಿಳೆಯೊಬ್ಬರನ್ನು ದಿನನಿತ್ಯ ಕಾಡಾನೆ ಹಾವಳಿಯಿರುವ ದಾರಿಯಾಗಿ ಎರಡು ಕಿ.ಮೀ ದೂರವಿರುವ ಮುಖ್ಯರಸ್ತೆಗೆ ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾರೆ. ಅಲ್ಲಿಂದ ಬೇರೆ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ: ಚಕ್ಕಿನದಿಯ ರೈಲ್ವೆ ಸೇತುವೆ ಕುಸಿತ
ಬಳ್ಳಕ್ಕದಲ್ಲಿ ಎಪ್ಪತ್ತು ವರ್ಷದ ಮಹಿಳೆಯೊಬ್ಬರು ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದರು. ಶುಕ್ರವಾರ ಅವರನ್ನು ಚಿಕಿತ್ಸೆಗಾಗಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ಆದರೆ ಈ ಭಾಗದಲ್ಲಿ ರಸ್ತೆ ಇದ್ದರೂ ಅಭಿವೃದ್ದಿ ಕಾಣದ ಕಾರಣ ಇಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ವೃದ್ಧೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದಾರೆ.
ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ಭಾಗದ ಜನರಿಗೆ ಎಂಜಿರ ಹತ್ತಿರದ ಪೇಟೆಯಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಈ ರಸ್ತೆ ಕೆಸರುಮಯವಾದ ಕಾರಣ ಈ ಭಾಗದ ಜನ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಕಿ.ಮೀ. ಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು.