ಮಂಗಳೂರು ಮನಪಾ ಸುರತ್ಕಲ್ ವಲಯ ಕಚೇರಿಯ ನೂತನ ಕಟ್ಟಡ ಉದ್ಘಾಟನೆ
ಸುರತ್ಕಲ್ : ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ಕಚೇರಿಯ ನೂತನ ಕಟ್ಟಡ ಶನಿವಾರ ಉದ್ಘಾಟನೆಗೊಂಡಿತು.
ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಸುರತ್ಕಲ್‌ನಲ್ಲಿ ಹೈಟೆಕ್ ಆಗಿರುವ ವಿಭಾಗೀಯ ಕಚೇರಿ ಪ್ರಾರಂಭಗೊಂಡಿದೆ. ಇದಕ್ಕಾಗಿ ಪಾಲಿಕೆ ಮೇಯರ್ ಸಹಿತ ಇಡೀ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಜನರು ಸಕಾಲದಲ್ಲಿ ಸರಕಾರಿ ಸೇವೆಗಳನ್ನು ಬಳಸಿಕೊಳ್ಳಲು ಇದು ನೆರವಾಗಲಿದೆ ಎಂದರು.
ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ಮಾತನಾಡಿ, ಸುರತ್ಕಲ್ ವಲಯ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾರಿಗೂ ಕಾಯದೆ ಟೋಕನ್ ಪಡೆದು ಸುಗಮವಾಗಿ ಸೇವೆ ಪಡೆದುಕೊಳ್ಳಬಹುದು ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದೆ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್ ಗಳಾದ ನಯನ ಕೋಟ್ಯಾನ್, ಶ್ವೇತ ಪೂಜಾರಿ, ಭರತ್ ರಾಜ್, ಶಂಶಾದ್ ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರ ಕಚೇರಿಯಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ವಿರೋಧ
ನೂತನ ಮನಪಾ ಸುರತ್ಕಲ್ ವಲಯ ಕಚೇರಿಯಲ್ಲಿರುವ ಶಾಸಕ ಭರತ್ ಶೆಟ್ಟಿಯವರ ಕಚೇರಿಯಲ್ಲಿ ಸಾವರ್ಕರ್‌ರ ಭಾವಚಿತ್ರ ಅಳವಡಿಸಿರುವುದಕ್ಕೆ ಸುರತ್ಕಲ್ 5ನೇ ವಾರ್ಡ್‌ನ ಎಸ್‌ಡಿಪಿಐ ಕಾರ್ಪೊರೇಟರ್ ಶಂಷಾದ್ ಅಬೂಬಕರ್ ವಿರೋಧ ವ್ಯಕ್ತಪಡಿಸಿದರು.
ಕಚೇರಿ ಉದ್ಘಾಟನೆಯ ಬಳಿಕ ಸಚಿವ ಸುನೀಲ್ ಕುಮಾರ್, ಶಾಸಕ ಭರತ್ ಶೆಟ್ಟಿಯವರು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಪರ ಘೋಷಣೆಗಳನ್ನು ಕೂಗಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಂಷಾದ್ ಅಬೂಬಕರ್ ವಿರೋಧ ವ್ಯಕ್ತಪಡಿಸಿದರು. ಸರಕಾರಿ ಕಚೇರಿಯಲ್ಲಿ ಸಾವರ್ಕರ್‌ರ ಭಾವಚಿತ್ರ ಹಾಕಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದರು.
ಸಾವರ್ಕರ್ ಭಾವಚಿತ್ರ ಹಾಕಲು ಯಾರ ಅನುಮತಿಯೂ ಬೇಕಿಲ್ಲ: ಶಾಸಕ ಭರತ್ ಶೆಟ್ಟಿ
ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ವೈ.ಭರತ್ ಶೆಟ್ಟಿ, ಸಂಸತ್‌ನಲ್ಲೇ ಸಾವರ್ಕರ್‌ರ ಭಾವಚಿತ್ರವಿದೆ. ಆದ್ದರಿಂದ ಶಾಸಕರ ಕಚೇರಿಯಲ್ಲಿ ಭಾವಚಿತ್ರ ಅಳವಡಿಕೆಗೆ ಯಾರ ಅನುಮತಿಯೂ ಬೇಕಿಲ್ಲ. ಅಷ್ಟಕ್ಕೂ ನಾವು ದೇಶದ್ರೋಹಿಯ ಫೋಟೊ ಅಳವಡಿಸಿಲ್ಲ ಎಂದು ಹೇಳಿದರು.
ಮಾಜಿ ಶಾಸಕ, ಕಾಂಗ್ರೆಸ್ ಮುಖಂಡರಿಗಿಲ್ಲ ಆಹ್ವಾನ
ಮಂಗಳೂರು ಮನಪಾ ಸುರತ್ಕಲ್ ವಲಯ ಕಚೇರಿ ಉದ್ಘಾಟನೆಗೆ ಮಾಜಿ ಶಾಸಕರ ಸಹಿತ, ಯಾವುದೇ ಪಕ್ಷಗಳ ಅಧಿಕೃತರಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ವಲಯ ಕಚೇರಿ ನಿರ್ಮಾಣಕ್ಕೆ ಸುಮಾರು 4.2 ಕೋ.ರೂ. ವೆಚ್ಚ ತಗುಲಿದ್ದು, ಅಂದಿನ ಸಿದ್ದರಾಮಯ್ಯರ ಸರಕಾರ ವಿಶೇಷ ಅನುದಾನದಡಿ 2.25 ಕೋ. ರೂ. ಅನುದಾನ ಒದಗಿಸಿಕೊಟ್ಟಿದೆ. ಆದರೆ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಶಾಸಕ ಸಹಿತ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.