ಬಿಜೆಪಿಯಿಂದ ಕೀಳುಮಟ್ಟದ ರಾಜಕೀಯ ಮಾಡುವ ಹಗೆತನದ ಸಂಸ್ಕೃತಿ: ವೀರಪ್ಪ ಮೊಯಿಲಿ
ಕುಂದಾಪುರ, ಆ.20: ರಾಜಕೀಯದಲ್ಲಿ ವೈಯಕ್ತಿಕವಾದ ಹಗೆತನ ಕರ್ನಾಟಕದಲ್ಲಿ ಇದೇ ಮೊದಲು. ಕೀಳು ಮಟ್ಟದ ರಾಜಕೀಯ ಮಾಡುವ ಇಂತಹ ಹಗೆತನದ ಸಂಸ್ಕೃತಿ ಮುಳುಗುವ ಕೊನೆ ಘಳಿಗೆಯಲ್ಲಿ ಬರುತ್ತದೆ. ಹಾಗಾಗಿ ಹತಾಶರಾಗಿ ಬಿಜೆಪಿ ಈ ಕೆಲಸ ಮಾಡಿದೆ. ಅವರು ಮತ್ತೆ ಚುನಾವಣೆಯಲ್ಲಿ ಗೆದ್ದು ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರ ಕಟ್‌ಬೆಲ್ತೂರು ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ಸಿಗರೆ ಮೊಟ್ಟೆ ಒಡೆಸಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿ ಕ್ರಿಯಿಸಿದ ಅವರು, ಇದೊಂದು ತಮಾಷೆಯ ಹೇಳಿಕೆ. ಬಿಜೆಪಿ ಹಾಗೂ ಸಂಘಪರಿವಾರದ ಪರ ಘೋಷಣೆ ಕೂಗುತ್ತಾ ಮೊಟ್ಟೆ ಎಸೆದಿದ್ದನ್ನು ಜನರು ಪ್ರತ್ಯಕ್ಷವಾಗಿ ನೋಡಿದ್ದಾರೆ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಪ್ರಧಾನಿ, ಬಿಜೆಪಿ ರಾಜ್ಯ ನಾಯಕರು ಸಹಿತ ಕಾರ್ಯಕರ್ತರಿಗೆ ಸುಳ್ಳು ಹೇಳುವುದೇ ಕಸುಬು ಆಗಿದೆ ಎಂದು ಅವರು ಟೀಕಿಸಿದರು.
ಪ್ರಸ್ತುತ ಇಡೀ ದೇಶದಲ್ಲಿ, ಕರ್ನಾಟಕದಲ್ಲಿ ಜನರಿಗೆ ಜೀವ ಬೆದರಿಕೆ ಹಾಗೂ ಆತಂಕ ಇದೆ. 2014ರ ನಂತರ ಈ ರೀತಿಯಾದ ಗೊಂದಲವಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಹಿಂದೆ ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅತಂತ್ರತೆ ಇದ್ದಾಗ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಎಚ್ಚೆತ್ತು ಕೊಂಡು ರಾಜಧರ್ಮ ಪಾಲಿಸುವ ಸಲುವಾಗಿ ಅಲ್ಲಿನ ಸಿಎಂ ಆಗಿದ್ದ ಮೋದಿ ಅವರನ್ನು ಪದಚ್ಯುತಿ ಮಾಡಲು ನಿರ್ಧರಿಸಿದ್ದರು. ಆಗ ಗೃಹಮಂತ್ರಿಯಾಗಿದ್ದ ಎಲ್.ಕೆ.ಅಡ್ವಾಣಿ ಮೋದಿಯನ್ನ್ನು ರಕ್ಷಿಸಿದರು ಎಂದರು.
ಕೇಂದ್ರ, ರಾಜ್ಯ ಸರಕಾರ ಉದ್ಯೋಗ ತುಂಬಿಸುತ್ತಿಲ್ಲ. ಸರಕಾರಿ ಉದ್ಯೋಗ ದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಪೆಟ್ರೋಲ್, ಡಿಸೇಲ್ ಆಧಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ನಿರ್ಧರಿತವಾಗುತ್ತದೆ. ಅಂದು ಕಚ್ಚಾ ತೈಲದ ಆಮದು ಬೆಲೆ ಹೆಚ್ಚಾದರೂ ಅದರ ಭಾರ ಗ್ರಾಹಕರಿಗೆ ಬೀಳದ ಹಾಗೆ ಸರಕಾರದಿಂದ ಸಬ್ಸಿಡಿ ಕೊಡುತ್ತಿದ್ದೆವು. ಈಗ ಜನ ಏನಾದರೂ ಆಗಲಿ ನಾವು ಅಧಿಕಾರ ನಿರ್ವಹಿಸುತ್ತೇವೆ ಎಂದು ಬಿಜೆಪಿ ವರ್ತಿಸುತ್ತಿದೆಂದು ಅವರು ಆರೋಪಿಸಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಸುರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.