ದಿನಪೂರ್ತಿ ಉಡುಪಿ ಡಿಸಿ ಕಾರ್ಯವೈಖರಿಯಲ್ಲಿ ಭಾಗಿಯಾದ ವಿದ್ಯಾರ್ಥಿನಿ!

Update: 2022-08-20 15:31 GMT

ಉಡುಪಿ, ಆ.20: ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಇತ್ತೀಚೆಗೆ ಕೌಶಲ್ಯ ಅಭಿವೃದ್ಧಿ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದ ಕೋಟದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದೀಕ್ಷಿತಾ ಶುಕ್ರವಾರ ದಿನಪೂರ್ತಿ ಜಿಲ್ಲಾಧಿಕಾರಿಯೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಬ್ರಹ್ಮಾವರ ತಾಲೂಕಿನ ಹೇರೂರಿನ ರಮೇಶ್ ಪೂಜಾರಿ ಮತ್ತು ಶ್ಯಾಮಲಾ ದಂಪತಿ ಪುತ್ರಿ ದೀಕ್ಷಿತಾ, ಇಲಾಖೆ ಮಾರ್ಗದರ್ಶನದಲ್ಲಿ ದಿನವಿಡೀ ಜಿಲ್ಲಾಧಿಕಾರಿ ಯೊಂದಿಗೆ ಕಾರ್ಯವೈಖರಿಯಲ್ಲಿ ಭಾಗಿಯಾಗಿದರು. ಜಿಲ್ಲಾಧಿಕಾರಿ ಕೂರ್ಮಾ ರಾವ್ ತಮ್ಮ ನಿಗದಿತ ಎಲ್ಲಾ ಕಾರ್ಯಕ್ರಮಗಳಿಗೆ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದು, ಜಿಲ್ಲಾಡಳಿತದ ಕಾರ್ಯ ವಿಧಾನಗಳನ್ನು ತಿಳಿಸಿಕೊಟ್ಟರು.

ಉಡುಪಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬ್ರಹ್ಮಾವರ ತಾಲೂಕಿನ ಹೇರೂರು ಬಳಿಯ ದೀಕ್ಷಿತಾ ಅವರ ಮನೆಗೆ ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ತಮ್ಮ ಸರಕಾರಿ ಕಾರನ್ನು ಕಳುಹಿಸಿದ್ದು, ಸಂಜೆ ಮನೆಗೆ ವಾಪಾಸು ಕಾರಿನಲ್ಲಿ ಕಳುಹಿಸಿಕೊಟ್ಟರು.

ಶುಕ್ರವಾರ ಬೆಳಗ್ಗೆ 9.30ಕ್ಕೆ ತಾಲೂಕು ಕಚೇರಿಯಲ್ಲಿದ್ದ ಸಭೆ, 10.30ಕ್ಕೆ ಕೃಷ್ಣಮಠದ ಕಾರ್ಯಕ್ರಮ, 2.30ಕ್ಕೆ ಸುದ್ದಿಗೋಷ್ಠಿ, 4 ಗಂಟೆಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಭೆಗಳಲ್ಲಿ ವೇದಿಕೆಯಲ್ಲಿ ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಜಿಲ್ಲಾಧಿಕಾರಿ ಕೆಲಸದ ವಿಧಾನವನ್ನು ಬಾಲಕಿಗೆ ತಿಳಿಸಿದರು.

"ಸದಾ ಹಸನ್ಮುಖಿಯಾಗಿರುವ ಜಿಲ್ಲಾಧಿಕಾರಿಯವರ ಜೊತೆ ದಿನಪೂರ್ತಿ ಸಂಚರಿಸಿ ಸಭೆಗಳಲ್ಲಿ ಭಾಗವಹಿಸಿದ್ದು ಸಂತಸ ನೀಡಿದೆ.  ಇಂದು ಅನೇಕ ಹೊಸ ವಿಷಯಗಳನ್ನು ಕಲಿಯಲು ನನಗೆ ಅವಕಾಶ ದೊರೆಯಿತು. ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐ.ಎಫ್.ಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದೇನೆ"

-ದೀಕ್ಷಿತಾ, ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News