×
Ad

ಗಾಂಜಾ ವ್ಯಸನಿಗಳಿಂದ ಯುವಕನ ಕೊಲೆಯತ್ನ ಆರೋಪ; ಓರ್ವ ಸೆರೆ

Update: 2022-08-20 21:50 IST

ಮಂಗಳೂರು : ನಗರ ಹೊರವಲಯದ ವಳಚ್ಚಿಲ್‌ನಲ್ಲಿ ಗಾಂಜಾ ವ್ಯಸನಿಗಳ ತಂಡವೊಂದು ಯುವಕನಿಗೆ ಇರಿದು ಕೊಲೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗಾಯಗೊಂಡ ರಮ್ಲಾನ್ ಆಸೀಫ್ (30)ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಆರೋಪಿಗಳ ಪೈಕಿ ಆಶಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಕುಳ ಗ್ರಾಮದ ವಳಚ್ಚಿಲ್ ನಿವಾಸಿ ರಮ್ಲಾನ್ ಮಿಫ್ರಾ ಎಂಬ 16 ವರ್ಷ ಪ್ರಾಯದ ಬಾಲಕನ ಮೊಬೈಲ್‌ನ್ನು ಆರೋಪಿ ಆಶಿಕ್ ಈ ಹಿಂದೆ ಪಡೆದಿದ್ದು, ಅದನ್ನು ಮರಳಿ ಕೇಳಿದಾಗ ಆಶಿಕ್ ಉಡಾಫೆಯಿಂದ ವರ್ತಿಸಿದ್ದ ಎನ್ನಲಾಗಿದೆ. ಈ ವಿಷಯವನ್ನು ರಮ್ಲಾನ್ ಮಿಫ್ರಾ ತನ್ನ ಸೋದರಮಾವ ರಮ್ಲಾನ್ ಅಸೀಫ್ ಬಳಿ ಹೇಳಿದ್ದ. ಅದರಂತೆ ರಮ್ಲಾನ್ ಆಸೀಫ್ ಮೊಬೈಲನ್ನು ಆಶಿಕ್ ಬಳಿ ಕೊಡುವಂತೆ ಕೇಳಿದಾಗ ಮಾತಿಗೆ ಮಾತು ಬೆಳೆದಿದ್ದು, ಮಿಸ್ತಾ ಮತ್ತು ಆಶಿಕ್ ಮತ್ತಿತರರು ರಮ್ಲಾನ್ ಆಸೀಫ್ ಮೇಲೆ ಮಾರಕಾಯುಧದಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಈ ಘಟನೆಯಲ್ಲಿ ರಮ್ಲಾನ್ ಆಸೀಫ್ ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಆಶಿಕ್‌ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ದ.ಕ. ಜಿಲ್ಲೆಯ ಹಲವು ಠಾಣೆಗಳಲ್ಲಿ ಕಳವು, ದರೋಡೆ, ಇನ್ನಿತರ ಪ್ರಕರಣ ದಾಖಲಾಗಿವೆ ಎಂದು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಯೂಸುಫ್ ಮಿರ್ಶಾದ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News