×
Ad

ಹೃತಿಕ್ ರೋಶನ್ ಅಭಿನಯದ ವಿವಾದಿತ ಜಾಹೀರಾತು ಹಿಂಪಡೆದ ಝೊಮ್ಯಾಟೋ

Update: 2022-08-21 23:49 IST

ಹೊಸದಿಲ್ಲಿ, ಆ,21: ಹೃತಿಕ್ ರೋಶನ್ ನಟಿಸಿರುವ ಜಾಹೀರಾತು ವಿವಾದದ ಕಿಡಿ ಹೊತ್ತಿಸಿರುವ ಹಿನ್ನೆಲೆಯಲ್ಲಿ ತಾನು ಆ ಜಾಹೀರಾತನ್ನು ಹಿಂಪಡೆದುಕೊಳ್ಳುವುದಾಗಿ ಜನಪ್ರಿಯ ಆಹಾರ ವಿತರಣಾ ಕಂಪೆನಿ ಝೊಮ್ಯಾಟೊ ರವಿವಾರ ತಿಳಿಸಿದೆ. ‘‘ ನಾವು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇವೆ.  ಜಾಹೀರಾತಿನ ಮೂಲಕ ಯಾರೊಬ್ಬರ ನಂಬಿಕೆಗೆ ಹಾಗೂ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವನ್ನು ನಾವು ಹೊಂದಿಲ್ಲ’’ ಎಂದು ಕಂಪೆನಿ ತಿಳಿಸಿದೆ.

ಈ ವಿವಾದಾತ್ಮಕ ಜಾಹೀರಾತಿನಲ್ಲಿ   ನಟ ಹೃತಿಕ್ ರೋಶನ್, ತನಗೆ ಉಜ್ಜಯನಿಯ ಊಟ ಬೇಕೆಂದು ಅನಿಸಿದೆ. ಹೀಗಾಗಿ ತಾನು ‘ಮಹಾಕಾಲ್’ ನಿಂದ ಥಾಲಿ ಊಟವನ್ನು  ಆರ್ಡರ್ ಮಾಡಿದ್ದಾಗಿ ಹೇಳುವ ದೃಶ್ಯಕ್ಕೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದ ಅರ್ಚಕರು ಆಕ್ಷೇಪಿಸಿದ್ದರು.  ಈ ಹಿನ್ನೆಲೆಯಲ್ಲಿ ಝೊಮ್ಯಾಟೊ ಜಾಹೀರಾತನ್ನು  ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದೆ.

ಝೊಮ್ಯಾಟೊ ಕಂಪೆನಿಯ ಈ ಜಾಹೀರಾತು ಹಿಂದೂಗಳ ಬಾವನೆಗೆ ಧಕ್ಕೆಉಂಟು ಮಾಡಿದೆಯೆಂದು  ಹೇಳಿದ ಅರ್ಚಕರು, ಕೂಡಲೇ ಅದನ್ನು ಹಿಂತೆಗೆದುಕೊಳ್ಳಬೇಕೆಂದು ಕೋರಿ ದೇವಾಲಯದ ಟ್ರಸ್ಟ್‌ನ  ಅಧ್ಯಕ್ಷರೂ ಆಗಿರುವ  ಉಜ್ಜಯಿನಿಯ ಜಿಲ್ಲಾಧಿಕಾರಿ ಅಶೀಶ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರು ಮತ್ತು ಕಂಪೆನಿಯ ವಿರುದ್ಧ  ಕ್ರಮಕ್ಕೆ ಆಗ್ರಹಿಸಿದ್ದರು.

ಈ ಬಗ್ಗೆ ಹೇಳಿಕೆಯಲ್ಲಿ ಸ್ಪಷ್ಟೀಕರಣ ನೀಡಿರುವ ಕಂಪೆನಿಯು ಜಾಹೀರಾತಿನಲ್ಲಿ ಉಜ್ಜಯಿನಿಯ ಮಹಾಕಾಲ್ ರೆಸ್ಟಾರೆಂಟ್‌ನ ಥಾಲಿಯನ್ನು ಪ್ರಸ್ತಾವಿಸಲಾಗಿದೆಯೇ ಹೊರತು ಶ್ರೀ ಮಹಾಕಾಲೇಶ್ವರ ದೇವಾಲಯದ್ದಲ್ಲವೆಂದು  ಹೇಳಿದೆ.

ಪ್ರತಿಯೊಂದು ನಗರಗಳಲ್ಲಿರುವ ಹೆಸರಾಂತ ಸ್ಥಳೀಯ ಹೊಟೇಲ್‌ಗಳು ಹಾಗೂ ಅವುಗಳ ಜನಪ್ರಿಯ ಖಾದ್ಯಗಳನ್ನು ಗುರುತಿಸುವ ತನ್ನ ಅಖಿಲ ಭಾರತ ಅಭಿಯಾನದ ಭಾಗವಾಗಿ ಈ ವಿಡಿಯೋ ಜಾಹೀರಾತನ್ನು ಪ್ರಸಾರ ಮಾಡಲಾಗಿತ್ತು ಎಂದು ಝೊಮ್ಯಾಟೊ ಕಂಪೆನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News