×
Ad

ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅನರ್ಹತೆ ಕೋರುವ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

Update: 2022-08-21 23:50 IST

ಹೊಸದಿಲ್ಲಿ, ಆ.21: ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಅವರನ್ನು ಶಾಸಕ ಹಾಗೂ ಸಚಿವ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕೋರಿ  ಸಲ್ಲಿಸಲಾದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ.

ಸತ್ಯೇಂದ್ರ ಜೈನ್ ಅವರ ಅರವಿಂದ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರದಲ್ಲಿ ಖಾತೆ ರಹಿತ ಸಚಿವರಾಗಿದ್ದಾರೆ. ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಜಾರಿ ನಿರ್ದೇಶನಾಲಯವು ಮೇ 30ರಂದು ಬಂಧಿಸಿತ್ತು. ಪ್ರಸಕ್ತ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಸಿಬಿಐ 2017ರಲ್ಲಿ  ಸಲ್ಲಿಸಿದ ಎಫ್‌ಐಆರ್ ವರದಿಯನ್ನು ಆಧರಿಸಿ ಕಪ್ಪುಹಣ ಬಿಳುಪು ಪ್ರಕರಣ ತನಿಖೆ ನಡೆಯುತ್ತಿದೆ. 2015ರ ಫೆಬ್ರವರಿ ಹಾಗೂ 2017ರ ಮೇ ತಿಂಗಳ ನಡುವೆ  ಸತ್ಯೇಂದ್ರ ಜೈನ್ ಅವರು ತನ್ನ ಆದಾಯವನ್ನು ಮೀರಿದ ಆಸ್ತಿಯನ್ನು ಸಂಪಾದಿಸಿದ್ದಾರೆಂದು ಸಿಬಿಐ ಆಪಾದಿಸಿದೆ.

ತನ್ನನ್ನು ಸಾಮಾಜಿಕ ಕಾರ್ಯಕರ್ತನೆಂದು ಪರಿಚಯಿಸಿಕೊಂಡಿರುವ ಆಶೀಶ್ ಕಮಾರ್ ಶ್ರೀವಾಸ್ತವ ಎಂಬವರು  ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ  ಸತ್ಯೇಂದ್ರ ಜೈನ್ ಅವರನ್ನು  ಮಾನಸಿಕ ಅಸ್ವಸ್ಥನೆಂದು ಘೋಷಿಸಬೇಕೆಂದು ಕೋರಿದ್ದರು.

ತನಿಖೆಯ ಸಂದರ್ಭ ಸತ್ಯೇಂದ್ರ ಜೈನ್ ಅವರನ್ನು ಕೆಲವು ದಾಖಲೆಗಳ ಕುರಿತು ಪ್ರಶ್ನಿಸಿದಾಗ, ತಾನು ಕೊರೋನ ಸೋಂಕಿನಿಂದ ತೀವ್ರವಾಗಿ ಅಸ್ವಸ್ಥಗೊಂಡ ಆನಂತರ ತನಗೆ  ಸ್ಮರಣಾ ಶಕ್ತಿ ಕಳೆದುಹೋಗಿರುವುದರಿಂದ ಕಾಗದಪತ್ರಗಳಿಗೆ ಸಹಿಹಾಕಿರುವುದು  ನೆನಪಾಗುತ್ತಿಲ್ಲವೆಂದು ಸಮಜಾಯಿಷಿ ನೀಡಿದ್ದರು.

ಸತ್ಯೇಂದ್ರ ಜೈನ್ ಅವರ ಸ್ಮರಣಾಶಕ್ತಿಯ ನಷ್ಟವಾಗಿರುವುದನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಲುವ  ಸಾಧ್ಯತೆಯಿರುವುದರಿಂದ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ದಿಲ್ಲಿಯ ನಿವಾಸಿಗಳು ತೊಂದರೆಗೊಳಗಾಗುವ ಅಪಾಯವಿದೆಯೆಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.  ಸಚಿವರಾಗಿ ಜೈನ್ ಅವರು ಕೈಗೊಂಡಿರುವ ಎಲ್ಲಾ ನಿರ್ಧಾರಗಳನ್ನು ಅಸಿಂಧುವೆಂದು ಘೋಷಿಸಬೇಕೆಂಬುದಾಗಿಯೂ  ಶ್ರೀವಾಸ್ತವ ಅವರು ನ್ಯಾಯಾಲವನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News