ಕೈರೊ ಮೆಟ್ರೊಗೆ ಈಜಿಪ್ಟ್‌ನ ಮೊದಲ ರೈಲು ಚಾಲಕಿ!

Update: 2022-08-22 04:31 GMT

ಕೈರೊ: ಈಜಿಪ್ಟ್ ರಾಜಧಾನಿಯ ಎರಡು ಕೋಟಿ ಮಂದಿಗೆ ಸೇವೆಯನ್ನು ವಿಸ್ತರಿಸಲು ಸಜ್ಜಾಗುತ್ತಿರುವ ಕೈರೊ ಮೆಟ್ರೊ (Cairo metro), ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ರೈಲು ಚಾಲಕಿಯೊಬ್ಬರನ್ನು ಸೇವೆಗೆ ನಿಯೋಜಿಸಿಕೊಂಡಿದೆ.

ಔಪಚಾರಿಕ ಉದ್ಯೋಗದಲ್ಲಿ ವಿರಳ ಸಂಖ್ಯೆಯ ಮಹಿಳೆಯರು ಇರುವ ಈಜಿಪ್ಟ್‌ನಲ್ಲಿ ಇದು ದೊಡ್ಡ ಸುದ್ದಿಯಾಗಿದೆ.

ಕಳೆದ ಏಪ್ರಿಲ್‍ನಿಂದ ಮೆಟ್ರೊ ಜಾಲದ ಹೊಸ ಲೈನ್‍ಗಳಲ್ಲಿ ಮಹಿಳಾ ಚಾಲಕರು ಮೆಟ್ರೊ ರೈಲು ಚಲಾಯಿಸುತ್ತಿರುವುದು ಹಲವರ ಹುಬ್ಬೇರಿಸಿದೆ. ಈ ಕ್ರಮದ ಬಗ್ಗೆ ಹಲವು ಮಂದಿ ತೀರಾ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಈಜಿಪ್ಟ್ ಮಹಿಳೆಯರಿಗೆ ಮತದಾನದ ಹಕ್ಕು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ದೊರೆತದ್ದು 1956ರಲ್ಲಿ. ಕೈರೊ ಮೆಟ್ರೊದಲ್ಲಿ ಪುರುಷರ ಜತೆ ಪ್ರಯಾಣಿಸಲು ಇಚ್ಛಿಸದ ಮಹಿಳೆಯರಿಗೆ ಪ್ರತ್ಯೇಕ ಬೋಗಿಗಳಿವೆ.

ವ್ಯವಹಾರ ಕ್ಷೇತ್ರದಲ್ಲಿ ಪದವಿ ಪಡೆದಿರುವ, ಇಬ್ಬರು ಮಕ್ಕಳ ತಾಯಿಯಾದ ಹಿಂದ್ ಒಮರ್ (Hind Omar) ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಪ್ರಥಮ ಮಹಿಳೆ. ದೇಶದಲ್ಲಿ ಇದುವರೆಗೆ ಕೇವಲ ಶೇಕಡ 14.3ರಷ್ಟು ಮಹಿಳೆಯರು ಮಾತ್ರ ಔಪಚಾರಿಕ ಉದ್ಯೋದಲ್ಲಿದ್ದಾರೆ.

"ನನ್ನ ಕೈಯಲ್ಲಿ ಪ್ರತಿದಿನ ಸಾವಿರಾರು ಜನರ ಜೀವ ಇರುತ್ತದೆ" ಎಂದು 30 ವರ್ಷದ ಮಹಿಳೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಪ್ಪುಬಿಳಿಯ ಶಿರವಸ್ತ್ರದ ಜತೆಗೆ ಆರ್‌ಎಟಿಪಿ (RATP)-ದೇವ್ ಲೋಗೊ ಹೊಂದಿದ ಫ್ಲೊರೊಸೆಂಟ್ ಬಣ್ಣದ ಜಾಕೆಟ್ ಧರಿಸಿ ಕರ್ತವ್ಯಕ್ಕೆ ಬರುವ ಒಮರ್, ತನ್ನ ಕುಟುಂಬ ಕೂಡಾ ಇದಕ್ಕೆ ಬೆಂಬಲ ನೀಡಿರುವ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿರುವುದಾಗಿ newindianexpress.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News