ಆ.29-ಸೆ.2: ಪಂಪ್‌ವೆಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವ
ಮಂಗಳೂರು, ಆ.22: ಕಂಕನಾಡಿ ಪಂಪ್‌ವೆಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಆ.29ರಿಂದ ಸೆ.2ರ ವರೆಗೆ 5 ದಿನಗಳ ಕಾಲ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಯೋಜನೆಗೊಳ್ಳಲಿದೆ.
ನೂತನವಾಗಿ ಉದ್ಘಾಟನೆಗೊಂಡ ಸಮಿತಿ ಕಟ್ಟಡ ಸುಮುಖ ಭವನದಲ್ಲಿ ಗಣೇಶೋತ್ಸವ ಜರುಗಲಿದ್ದು, ವಿವಿಧ ವೈದಿಕ ಕಾರ್ಯಕ್ರಮ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿದಿನ ಹಮ್ಮಿಕೊಳ್ಳಲಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗಣೇಶೋತ್ಸವ ಪ್ರಯುಕ್ತ ಐದು ದಿನಗಳ ಕಾಲ ನಿರಂತರ ಬೆಳಗ್ಗೆ, ಸಂಜೆ ಉಪಹಾರ ಹಾಗೂ ಮಧ್ಯಾಹ್ನ - ರಾತ್ರಿ ಅನ್ನಸಂತರ್ಪಣೆ ನೆರವೇರಲಿದೆ. ಅನ್ನದಾನಕ್ಕೆ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ಆ.29ರಂದು ಸಂಜೆ 4 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಡಲಿದೆ.
ಸೆ.2ರಂದು ಸಂಜೆ 4 ಗಂಟೆಗೆ ಉತ್ಸವ ಸ್ಥಳದಿಂದ ಶೋಭಾಯಾತ್ರೆ ಹೊರಡಲಿದೆ. ಪಂಪ್ ವೆಲ್, ಕಂಕನಾಡಿ ಹಳೇ ಮಾರ್ಗವಾಗಿ, ಕಂಕನಾಡಿ ವೃತ್ತದಲ್ಲಿ ತಿರುಗಿ ಬೈಪಾಸ್ ರಸ್ತೆಯಾಗಿ ಪಂಪ್ ವೆಲ್, ಗರೋಡಿ ಹಾಗೂ ನಾಗುರಿಯಾಗಿ ಪಡೀಲ್ ನ ಬೈರಾಡಿ ಕೆರೆಯಲ್ಲಿ ದೇವರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕೆ., ಗೌರವಾಧ್ಯಕ್ಷ ಎಂ.ಎಂ.ಪ್ರಭು, ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೆ.ಬಿ.ಅರಸ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.