×
Ad

ಮಂಗಳೂರು: ತಪ್ಪಿಸಲು ಯತ್ನಿಸಿದ ಕೊಲೆಯತ್ನದ ಆರೋಪಿಗೆ ಗುಂಡೇಟು

Update: 2022-08-22 17:32 IST
ಮುಸ್ತಾಕ್

ಮಂಗಳೂರು, ಆ.22:ಕೊಲೆಯತ್ನ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಯು ಸ್ಥಳ ಮಹಜರು ವೇಳೆ ತಪ್ಪಿಸಲೆತ್ನಿಸಿದಾಗ ಪೊಲೀಸರು ಆತನಿಗೆ ಗುಂಡೇಟು ಹಾಕಿದ ಘಟನೆ ಸೋಮವಾರ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳ ಗ್ರಾಮದಲ್ಲಿ ನಡೆದಿದೆ.

ರೌಡಿಶೀಟರ್ ಆಗಿರುವ ಮಿಸ್ತಾ ಯಾನೆ ಮುಸ್ತಾಕ್ (26) ಗುಂಡೇಟಿಗೊಳಗಾದ ಆರೋಪಿ. ಈ ಘಟನೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ವಿನಾಯಕ ಬಾವಿಕಟ್ಟಿ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಸದ್ದಾಂ ಹುಸೇನ್ ಎಂಬವರಿಗೂ ಗಾಯವಾಗಿದೆ. ಆರೋಪಿ ಮಿಸ್ತಾ ಯಾನೆ ಮುಸ್ತಾಕ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅ.19ರಂದು ರಾತ್ರಿ ವಳಚ್ಚಿಲ್‌ನಲ್ಲಿ ರಮ್ಲಾನ್ ಆಸೀಫ್ (30) ಎಂಬವರ ಕೊಲೆಗೆ ತಂಡವೊಂದು ಯತ್ನಿಸಿತ್ತು. ಇದರಲ್ಲಿ ಮಿಸ್ತಾ ಯಾನೆ ಮುಸ್ತಾಕ್ ಪ್ರಮುಖ ಆರೋಪಿಯಾಗಿತ್ತು. ಈತನನ್ನು ಬಂಧಿಸಿದ್ದ ಮಹಜರು ನಡೆಸಲು ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಸೋಮವಾರ ಕರೆದೊಯ್ದಿದ್ದರು. ಈ ವೇಳೆ ಆರೋಪಿಯು ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಪ್ರಕರಣದ ವಿವರ: ವಳಚ್ಚಿಲ್ ನಿವಾಸಿ, ಕಾಲೇಜು ವಿದ್ಯಾರ್ಥಿಯಾಗಿದ್ದ ರಮ್ಲಾನ್ ಮಿಫ್ರಾ ಎಂಬಾತನ ಮೊಬೈಲ್‌ನ್ನು ಆಶಿಕ್ ಎಂಬಾತ ಕಿತ್ತುಕೊಂಡಿದ್ದ. ಆ ಮೊಬೈಲನ್ನು ಮಿಫ್ರಾ ಮರಳಿ ಕೇಳುವಾಗ ಆಶಿಕ್ ಉಡಾಫೆಯಿಂದ ವರ್ತಿಸಿದ್ದ ಎನ್ನಲಾಗಿದೆ. ಈ ವಿಷಯ ಮಿಫ್ರಾ ತನ್ನ ಮಾವ ರಮ್ಲಾನ್ ಆಸೀಫ್ ಬಳಿ ಹೇಳಿದ್ದು, ಅದರಂತೆ ಆಸೀಫ್ ಆರೋಪಿಗಳಾದ ಆಶಿಕ್ ಮತ್ತು ಮಿಸ್ತಾ ಯಾನೆ ಮುಸ್ತಾಕ್ ಬಳಿ ಮೊಬೈಲ್ ಕೇಳಿದ್ದರು. ಇದರಿಂದ ಸಿಟ್ಟಾದ ಆರೋಪಿಗಳು ಆಸೀಫ್‌ಗೆ ಡ್ರ್ಯಾಗರ್ ನಿಂದ ಕೈ, ಕಿವಿಗೆ ಹಲ್ಲೆಗೈದಿದ್ದರು. ಗಂಭೀರ ಗಾಯಗೊಂಡಿದ್ದ ಆಸೀಫ್ ರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಮಿಸ್ತಾ ಯಾನೆ ಮುಸ್ತಾಕ್ ಬಂಧಿಸಿ ಮಾರಾಕಾಯುಧ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಸೋಮವಾರ ಸಂಜೆ ವೇಳೆ ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಜಾನ್ಸನ್ ಮತ್ತಿತರರು ಆರೋಪಿಯನ್ನು ಸ್ಥಳ ಮಹಜರಿಗೆ ಕಂಬಳ ಗ್ರಾಮಕ್ಕೆ ಕರೆದುಕೊಂಡು ಹೋದಾಗ ಆರೋಪಿಯು ಪೊಲೀಸರ ಮೇಲೆ ಹಲ್ಲೆಗೈದು ಪರಾರಿಗೆ ಯತ್ನಿಸಿದ್ದ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಸಹಿತ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಆರೋಪಿಯ ಕಾಲಿಗೆ ಗಾಯವಾಗಿದೆ.

ಆರೋಪಿಯ ವಿರುದ್ಧ ದ.ಕ.ಮತ್ತು ಉಡುಪಿ ಜಿಲ್ಲೆಯ ಹಲವು ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ಕಳ್ಳತನ ಮತ್ತಿತರ ಪ್ರಕರಣ ದಾಖಲಾಗಿದೆ.

ಸೋಮವಾರ ಆರೋಪಿಯು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ತೋರಿಸುತ್ತಿದ್ದಾಗ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಲು ಯತ್ನಿಸಿದ. ತಕ್ಷಣ ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡೇಟು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಯು ರಾತ್ರಿ ವೇಳೆ ಅಡ್ಯಾರ್, ಹರೇಕಳ ಪರಿಸರದ ಕೆಲವರಿಗೆ ಚೂರಿಯಿಂದ ಹಲ್ಲೆಗೈದು ಭಯದ ವಾತಾವರಣ ನಿರ್ಮಿಸಿದ್ದ. ಜನರು ಈತನಿಗೆ ಹೆದರಿ ದೂರು ನೀಡುತ್ತಿರಲಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News