ಹೊಸ ವೀಸಾ ನೀತಿ: ಭಾರತೀಯರಿಗೆ ಬಾಗಿಲು ತೆರೆದ ಚೀನಾ

Update: 2022-08-23 03:49 GMT
ಫೈಲ್‌ ಫೋಟೊ 

ಹೊಸದಿಲ್ಲಿ: ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಚೀನಾ ಕೊನೆಗೂ ಬಾಗಿಲು ತೆರೆದಿದೆ. ಸೋಮವಾರ ಪ್ರಕಟಿಸಲಾದ ಹೊಸ ವೀಸಾ ಅರ್ಜಿ ಸಂಸ್ಕರಣೆ ನಿಯಮಾವಳಿಯಡಿ ಕೋವಿಡ್ ಕಾರಣದಿಂದ ವಿಧಿಸಿದ್ದ ವೀಸಾ ನಿಷೇಧವನ್ನು ರದ್ದುಪಡಿಸಲಾಗಿದೆ. ಹೊಸ ನೀತಿ ಆಗಸ್ಟ್ 24ರಿಂದ ಜಾರಿಗೆ ಬರಲಿದೆ.

ಸುಮಾರು 23 ಸಾವಿರದಷ್ಟಿರುವ ಭಾರತೀಯ ವಿದ್ಯಾರ್ಥಿಗಳು ಚೀನಾ ವಿಶ್ವವಿದ್ಯಾನಿಲಯಗಳಿಗೆ ಮರಳಲು ಅವಕಾಶ ನೀಡುವಂತೆ ಭಾರತ ಪದೇ ಪದೇ ಮನವಿ ಮಾಡುತ್ತಾ ಬಂದಿತ್ತು. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಪ್ರಜೆಗಳ ವೀಸಾ ಅರ್ಜಿ ಸಂಸ್ಕರಣೆ ಮತ್ತು ಅಗತ್ಯತೆಗಳ ನಿಯಮಾವಳಿಯನ್ನೂ ಪರಿಷ್ಕರಿಸಲಾಗಿದೆ.

ರಾಜತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಭಾರತೀಯ ಪ್ರಜೆಗಳ ವೀಸಾಗಳನ್ನು ಅಮಾನತುಪಡಿಸಿ ಚೀನಾ 2020ರ ನವೆಂಬರ್ ನಲ್ಲಿ ಆದೇಶ ಹೊರಡಿಸಿತ್ತು. ಭಾರತಕ್ಕಿಂತ ಭಿನ್ನವಾಗಿ ಚೀನಾ ಉದ್ಯೋಗ ಹಾಗೂ ವ್ಯವಹಾರ ವೀಸಾಗಳನ್ನು ಕೂಡಾ ಸ್ಥಗಿತಗೊಳಿಸಿತ್ತು.

ಚೀನಾಗೆ ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳಿಗಾಗಿ ತೆರಳುವವರಿಗೆ ನೀಡುವ ಎಂ-ವೀಸಾ, ವಿನಿಮಯ, ಭೇಟಿ, ಅಧ್ಯಯನ ಪ್ರವಾಸ ಮತ್ತು ವಾಣಿಜ್ಯೇತರ ಚಟುವಟಿಕೆಗಳಿಗೆ ಚೀನಾಗೆ ತೆರಳುವ ಉದ್ದೇಶಕ್ಕೆ ಇರುವ ಎಫ್-ವೀಸಾ ಮತ್ತು ಚೀನಾದಲ್ಲಿ ಉದ್ಯೋಗ ಮಾಡುವ ಉದ್ದೇಶಕ್ಕೆ ನೀಡುವ ಝೆಡ್-ವೀಸಾಗಳು ಕೂಡಾ ಹೊಸ ನಿಯಮಾವಳಿಯಡಿ ಸೇರಿವೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News