×
Ad

ಸೆ.2ರಂದು ಪ್ರಧಾನಿ ಮೋದಿ ಮಂಗಳೂರು ಭೇಟಿ; ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಲೋಕಾರ್ಪಣೆ: ಸಂಸದ ನಳಿನ್ ಕುಮಾರ್

Update: 2022-08-23 17:13 IST
ಪ್ರಧಾನಿ ಮೋದಿ

ಮಂಗಳೂರು, ಆ. 23: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದಲ್ಲಿ ಸುಮಾರು 1200 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಸೆ.2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ಮಂಗಳೂರಿನಲ್ಲಿ  ಇಂದು ಈ ವಿಷಯ ತಿಳಿಸಿದ ನಳಿನ್ ಕುಮಾರ್, ಅಂದು ಬೆಳಗ್ಗೆ ಕೊಚ್ಚಿನ್ ಬಂದರು ಕಾರ್ಯಕ್ರಮ ಬಳಿಕ ಸಂಜೆ 3.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಎನ್‌ಎಂಪಿಎಗೆ ಭೇಟಿ ನೀಡಿ ಅಲ್ಲಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಲಿರುವರು. ಸಂಜೆ 5 ಗಂಟೆಗೆ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಲಿದೆ ಎಂದು ಹೇಳಿದರು.

ಸೆ.2ರಂದು ಬೆಳಗ್ಗೆ ಕೊಚ್ಚಿನ್ ಶಿಫ್‌ಯಾರ್ಡ್‌ನಲ್ಲಿ  ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧ ವಾಹಕ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವರು. ಅಪರಾಹ್ನ ಮಂಗಳೂರಿಗೆ ಆಗಮಿಸಿ ಎನ್‌ಎಂಪಿಎ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಅವರ ಪ್ರವಾಸದ ಅಧಿಕೃತ ವೇಳಾಪಟ್ಟಿ ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ನವಮಂಗಳೂರು ಬಂದರಿಗೆ ಭೇಟಿ ನೀಡುವ ಪ್ರಧಾನಿಯವರು  ಅಲ್ಲಿ ಈಗಾಗಲೇ ಪೂರ್ಣಗೊಂಡಿರುವ ಅನಘಾ ರಿಫೈನರಿ, ಬರ್ತ್ ನಂ.14 ಸೇರಿದಂತೆ 6 ಯೋಜನೆಗಳನ್ನು  ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ  ಸಾಗರಮಾಲಾ ಯೋಜನೆಯ ಕೆಲವು ಅಭಿವೃದ್ಧಿ ಕಾರ್ಯಕ್ಕೆ  ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಂಸದರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News