ಯುವಶಕ್ತಿಗಳನ್ನು ಸಮರ್ಪಕವಾಗಿ ಮುನ್ನಡೆಸುವ ಸೆಂಟರ್ ಕಾರ್ಯ ಶ್ಲಾಘನೀಯ: ವಿಜಯ ಕುಮಾರ್ ಪಡ್ಡಾಯೂರು
ಪುತ್ತೂರು: ಜಗತ್ತಿನಲ್ಲಿ ಅತೀ ಹೆಚ್ಚು ಯುವಶಕ್ತಿಗಳನ್ನು ಹೊಂದಿದ ರಾಷ್ಟ್ರವಾಗಿದೆ ಭಾರತ. ಈ ದೇಶದ ಯುವ ಸಂಪನ್ಮೂಲದ ಬೌದ್ಧಿಕ ಸಾಮರ್ಥ್ಯ, ಕೌಶಲ್ಯ, ಆಸಕ್ತಿ ಮತ್ತು ಸಮಯವನ್ನು ಸದ್ಬಳಕೆ ಮಾಡಲು ಅವರಿಗೆ ಶಿಕ್ಷಣ ಮತ್ತು ತರಬೇತಿ ನೀಡುತ್ತಿರುವ ಪುತ್ತೂರು ಕಮ್ಯೂನಿಟಿ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಯೋಧ ವಿಜಯಕುಮಾರ್ ಪಡ್ಡಾಯೂರು ಅಭಿಪ್ರಾಯ ಪಟ್ಟರು.
ಅವರು ಮಂಗಳವಾರ ಪುತ್ತೂರು ಕಮ್ಯುನಿಟಿ ಸೆಂಟರಿಗೆ ಭೇಟಿ ನೀಡಿ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಲಿಷ್ಠ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಜ್ಞಾನ ಮತ್ತು ಆಸಕ್ತಿಯನ್ನು ಬಳಸಬೇಕು, ಅದಕ್ಕಾಗಿ ನಿಮಗೆ ಬೇಕಾಗಿರುವ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನಾವು ನೀಡಲಿದ್ದೇವೆ ಎಂದರು.
ಕಮ್ಯುನಿಟಿ ಸೆಂಟರಿನ ಅಧ್ಯಕ್ಷ ಅಮ್ಜದ್ ಖಾನ್ ಪೊಳ್ಯ ಮಾತನಾಡಿ, ವಿಜಯಕುಮಾರ್ ಮತ್ತು ನಾವು ಬಾಲ್ಯದ ಸ್ನೇಹಿತರು, ಜೊತೆಯಾಗಿ ಕ್ರಿಕೆಟ್ ಆಡಿದವರು, ನಮ್ಮ ಬಾಲ್ಯದ ಕಾಲದಲ್ಲಿ ನಮಗೆ ಬೇಕಾದಷ್ಟು ಅವಕಾಶಗಳು ಇತ್ತು. ಹಾಗಾಗಿ, ನಾನು ಉದ್ಯಮದಲ್ಲಿ, ವಿಜಯ್ ಸೈನ್ಯದಲ್ಲಿ ಸೇರಿದರು. ಈಗ ಅವಕಾಶಗಳು ಸ್ಪರ್ಧಾತ್ಮಕವಾಗಿದೆ. ಸಮಾಜದ ಸಹಭಾಗಿತ್ವ ಮತ್ತು ಸಹಕಾರ ಕಡಿಮೆ ಇದೆ. ಹೀಗಾಗಿ ನೀವು ವಿಜ್ಞಾನ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಅತ್ಯಂತ ಕಷ್ಟಕರ ಸನ್ನಿವೇಶ ಎದುರಿಸಬೇಕಾದೀತು, ಹಾಗಾಗಿ, ನಿಮ್ಮ ಮೆದುಳಿನ ಯೋಚನೆ, ಆಸಕ್ತಿಗಳನ್ನು ಭವಿಷ್ಯದ ಸವಾಲನ್ನು ಎದುರಿಸಲು ರೂಪಿಸಬೇಕು ಎಂದರು.
ಸೆಂಟರಿನ ಯೋಜನೆಯನ್ನು ವೀಕ್ಷಿಸಿದ ವಿಜಯಕುಮಾರ್ ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸುವ ಪ್ರಯತ್ನ ಇನ್ನಷ್ಟೂ ಹೆಚ್ಚಬೇಕು, ಯಾವುದೇ ಅಗತ್ಯಕ್ಕೂ ನನ್ನನ್ನು ಸಂಪರ್ಕಿಸಿ ನಾನು ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು.