ಶಾಲಾ ಪಠ್ಯಪುಸ್ತಕದಲ್ಲಿ ಅಸಭ್ಯ ರೇಖಾಚಿತ್ರ 27 ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದ ಚೀನಾ

Update: 2022-08-23 16:18 GMT
PHOTO ; TAIPEI TIMES

ಬೀಜಿಂಗ್, ಆ.೨೩: ಶಾಲೆಯ ಗಣಿತ ಪಠ್ಯಪುಸ್ತಕಗಳಲ್ಲಿ ಅಸಭ್ಯ ಹಾಗೂ ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಭಾವನೆಯನ್ನು ಪ್ರಚೋದಿಸುವ ರೇಖಾಚಿತ್ರಗಳನ್ನು ಮುದ್ರಿಸಿದ ಪ್ರಕರಣದಲ್ಲಿ ಶಿಕ್ಷಣ ಇಲಾಖೆಯ 27ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿರುವುದಾಗಿ ಚೀನಾದ ಅಧಿಕಾರಿಗಳು ಘೋಷಿಸಿದ್ದಾರೆ.

10 ವರ್ಷದ ಹಿಂದೆ ಪ್ರಕಟವಾದ ಪ್ರ‍್ರಾಥಮಿಕ ಶಾಲೆಯ ಗಣಿತ ಪುಸ್ತಕದಲ್ಲಿ ಪಠ್ಯದ ಜತೆಗೆ ನೀಡಿರುವ ರೇಖಾಚಿತ್ರಗಳು ಅತ್ಯಂತ ಕೊಳಕು ಮತ್ತು ಅಸಭ್ಯವಾಗಿದ್ದು ಚೀನಾದ ಮಕ್ಕಳ ನೈಜ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಚೀನಾದ ಶಿಕ್ಷಣ ಇಲಾಖೆ ಹೇಳಿರುವುದಾಗಿ `ದಿ ಗಾರ್ಡಿಯನ್' ವರದಿ ಮಾಡಿದೆ. ಸರಕಾರಿ ಸ್ವಾಮ್ಯದ ಪೀಪಲ್ಸ್ ಎಜುಕೇಶನ್ ಪ್ರೆಸ್ ಈ ಪುಸ್ತಕಗಳನ್ನು ಮುದ್ರಿಸಿದೆ. ಕಳೆದ10 ವರ್ಷದಿಂದಲೂ ಪಠ್ಯವಾಗಿದ್ದ ಈ ಪುಸ್ತಕದಲ್ಲಿನ ವಿವಾದಾತ್ಮಕ ಚಿತ್ರಗಳ ಬಗ್ಗೆ ಕಳೆದ  ಮೇ ತಿಂಗಳಿನಲ್ಲಿ ಶಿಕ್ಷಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ ಬಳಿಕ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಬಾಲಕಿಯೊಬ್ಬಳು ಹಗ್ಗದ ಮೇಲಿಂದ ಜಿಗಿಯುವಾಗ ಅವಳ ಒಳಬಟ್ಟೆ ಕಾಣಿಸುವುದು, ಬಾಲಕಿಯೊಬ್ಬಳ ಕಾಲಲ್ಲಿ ಹಚ್ಚೆ(ಟ್ಯಾಟೂ), ಬಾಲಕಿಯನ್ನು ಮತ್ತೊಬ್ಬ ಬಾಲಕ ಹಿಂದಿನಿAದ ಅಪ್ಪಿಹಿಡಿದಿರುವುದು ಮುಂತಾದ ರೇಖಾಚಿತ್ರಗಳ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ, ರೇಖಾಚಿತ್ರಗಳಲ್ಲಿರುವ ಮಕ್ಕಳು ಧರಿಸಿರುವ ಬಟ್ಟೆಯು ಅಮೆರಿಕದ ಧ್ವಜದ ಬಣ್ಣವನ್ನು ಹೋಲುತ್ತದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ನಡೆಸಿದ ವಿಚಾರಣೆಯ ಬಳಿಕ 27 ಅಧಿಕಾರಿಗಳು ಕರ್ತವ್ಯ ಲೋಪದ ಜತೆಗೆ ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ದೃಢಪಟ್ಟಿದೆ. ಅವರಿಗೆ ಶಿಕ್ಷೆ ವಿಧಿಸಲಾಗಿದ್ದು ಪಠ್ಯಪುಸ್ತಕ ಸಮಿತಿಯ ಮುಖ್ಯ ಸಂಪಾದಕರನ್ನು ವಜಾಗೊಳಿಸಿ ಅವರಿಗೆ ಡಿಮೆರಿಟ್ ಅಂಕ ನೀಡಲಾಗಿದೆ. ಪಠ್ಯಪುಸ್ತಕ ಮುದ್ರಿಸಿರುವ ಮುದ್ರಣಾಲಯಕ್ಕೆ ಮುಂದಿನ ದಿನದಲ್ಲಿ ಪಠ್ಯಪುಸ್ತಕ ಮುದ್ರಣದ ಯಾವುದೇ ಕಾರ್ಯ ವಹಿಸಬಾರದೆಂದು ಸೂಚಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News