×
Ad

ಸಿರಿಯಾ ಜತೆಗಿನ ಮಾತುಕತೆಗೆ ಪೂರ್ವಷರತ್ತು ವಿಧಿಸಿಲ್ಲ: ಟರ್ಕಿ

Update: 2022-08-23 22:32 IST

ಅಂಕಾರ, ಆ.೨೪: ಸಿರಿಯಾ ಸರಕಾರದ ಜತೆಗಿನ ಮಾತುಕತೆಗೆ ಯಾವುದೇ ಪೂರ್ವಷರತ್ತು ವಿಧಿಸಿಲ್ಲ ಮತ್ತು ಮಾತುಕತೆಗಳು ಗುರಿ ಆಧಾರಿತವಾಗಿರಬೇಕು ಎಂದು ಟರ್ಕಿಯ ವಿದೇಶಾಂಗ ಸಚಿವ ಮೆವ್ಲುತ್ ಕವುಸೊಗ್ಲು ಮಂಗಳವಾರ ಹೇಳಿದ್ದಾರೆ.

ಸಿರಿಯಾದಲ್ಲಿ ೧೧ ವರ್ಷದಿಂದ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಅಲ್ಲಿನ ಅಧ್ಯಕ್ಷ ಬಷರ್ ಅಸಾದ್‌ರನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ತೊಡಗಿರುವ ಬಂಡುಗೋರ ಪಡೆಯನ್ನು ಟರ್ಕಿ ಬೆಂಬಲಿಸುತ್ತಿದೆ ಮತ್ತು ಸಿರಿಯಾದೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಂಡಿದೆ. ಆದರೆ ರಶ್ಯದ ನೆರವು ಪಡೆದ ಸಿರಿಯಾ ಸೇನೆ ಬಂಡುಗೋರರನ್ನು ದೇಶದ ವಾಯವ್ಯದ ಅಂಚಿನ ಪ್ರದೇಶಕ್ಕೆ ಹಿಮ್ಮೆಟ್ಟಿಸುವಲ್ಲಿ ಸಫಲವಾಗಿದೆ. ಈ ಮಧ್ಯೆ, ಇತ್ತೀಚೆಗೆ ರಶ್ಯ ಮತ್ತು ಟರ್ಕಿಯ ಮಧ್ಯೆ ನಡೆದ ಮಾತುಕತೆಯ ಸಂದರ್ಭ ಗಡಿಪ್ರದೇಶದಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಸಿರಿಯಾಕ್ಕೆ ನೆರವಾಗುವಂತೆ ಟರ್ಕಿ ಅಧ್ಯಕ್ಷ ಎರ್ಡೋಗನ್‌ಗೆ ರಶ್ಯ ಅಧ್ಯಕ್ಷ ಪುಟಿನ್ ಸಲಹೆ ನೀಡಿದ್ದರು.

ಗಡಿದಾಟಿ ಬಂದಿರುವ ಸಿರಿಯಾದ ವಲಸಿಗರು ತಮ್ಮ ದೇಶಕ್ಕೆ ಸುರಕ್ಷಿತವಾಗಿ ಮರಳಲು ಸಿರಿಯಾದ ಕುರ್ಡಿಷ್ ಬಂಡುಗೋರರು ಅಡ್ಡಿಯಾದರೆ ಟರ್ಕಿ ಮತ್ತೆ ಸೇನಾ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಎರ್ಡೋಗನ್ ಎಚ್ಚರಿಸಿದ್ದಾರೆ. ಸಿರಿಯಾದ ಸುಮಾರು ೩.೬ ಮಿಲಿಯನ್ ನಿರಾಶ್ರಿತರು ಟರ್ಕಿಯಲ್ಲಿದ್ದಾರೆ ಎಂದವರು ಹೇಳಿದ್ದಾರೆ.

ಸಿರಿಯಾ ದೇಶ ಭಯೋತ್ಪಾಕದರಿಂದ ಮುಕ್ತವಾಗಬೇಕು ಎಂಬುದು ನಮ್ಮ ಆಗ್ರಹ. ಜನತೆ ತಮ್ಮ ದೇಶಕ್ಕೆ ಸುರಕ್ಷಿತವಾಗಿ ವಾಪಸಾಗಲು ಸಾಧ್ಯವಾಗುವ ವಾತಾವರಣ ನೆಲೆಸಬೇಕು. ಇಲ್ಲದಿದ್ದರೆ ಮಾತುಕತೆ ನಡೆಸುವುದರಲ್ಲಿ ಅರ್ಥವೇನಿದೆ ಎಂದು ಟರ್ಕಿ ಸರಕಾರ ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News