×
Ad

ಮನಪಾ: ಬಗೆಹರಿಯದ 23ನೆ ಮೇಯರ್-ಉಪ ಮೇಯರ್ ಮೀಸಲಾತಿ; ರಾಜ್ಯ ಸರಕಾರದಿಂದ 24ನೆ ಅವಧಿಯ ಮೀಸಲಾತಿ ಪ್ರಕಟ

Update: 2022-08-24 18:30 IST

ಮಂಗಳೂರು, ಆ.24: ರಾಜ್ಯ ಸರಕಾರ ಇಂದು ಎಲ್ಲಾ ಮಹಾನಗರ ಪಾಲಿಕೆಗಳ 24ನೆ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಿದೆ. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯ 24ನೆ ಅವಧಿಗೆ ಮೇಯರ್ ಸ್ಥಾನಕ್ಕೆ ‘ಸಾಮಾನ್ಯ’ ಹಾಗೂ ಉಪ ಮೇಯರ್ ಸ್ಥಾನ ‘ಸಾಮಾನ್ಯ ಮಹಿಳೆ’ ಗೆ ಮೀಸಲಾತಿ ಪ್ರಕಟವಾಗಿದೆ.

ಆದರೆ ಮಂಗಳೂರು ಪಾಲಿಕೆಯ 23ನೇ ಸಾಲಿನ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಇನ್ನೂ ಗೊಂದಲದಲ್ಲಿದೆ.  ಮಂಗಳೂರು ಪಾಲಿಕೆಯ 23ನೇ ಅವಧಿಗೆ ಮೇಯರ್ ಸ್ಥಾನವನ್ನು ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ ವರ್ಗಕ್ಕೆ ಮೀಸಲಿರಿಸಿ ಕಳೆದ ವರ್ಷವೇ ಸರಕಾರ ಆದೇಶಿಸಿತ್ತು. ಅದರಂತೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಮಾ.2ರಂದು ನಿಗದಿಯಾಗಿತ್ತು. ಆದರೆ, ಮಹಾರಾಷ್ಟ್ರದ ರಾಹುಲ್ ರಮೇಶ್ ಎಂಬವರು ಸುಪ್ರಿಂಕೋರ್ಟ್‌ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿದ ಕಾರಣದಿಂದ ಸರಕಾರ ಮಂಗಳೂರು ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ.

ಮಂಗಳೂರು ಮಹಾನಗರ ಪಾಲಿಕೆಯ 22ನೇ ಸಾಲಿನ ಮೇಯರ್ ಆಗಿ ಆಯ್ಕೆಯಾಗಿದ್ದ  ಪ್ರೇಮಾನಂದ ಶೆಟ್ಟಿ ಹಾಗೂ ಉಪಮೇಯರ್ ಆಗಿ ಸುಮಂಗಳಾ ರಾವ್ ಅವರೇ ಸದ್ಯ ಮುಂದುವರಿದಿದ್ದಾರೆ.  23ನೇ ಮೇಯರ್ ಮೀಸಲಾತಿಯು ಕಳೆದ ವರ್ಷವೇ ಬಂದಿತ್ತಾದರೂ ಚುನಾವಣೆ ನಡೆದಿಲ್ಲ. ಇದೀಗ 24ನೆ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಮೇಯರ್-ಉಪಮೇಯರ್ ಮೀಸಲಾತಿ ಆಯಾ ವರ್ಷವೇ ಸರಕಾರ ಪ್ರಕಟ ಮಾಡುತ್ತದೆ. ಆದರೆ, ಮಂಗಳೂರು ಪಾಲಿಕೆ ಹಾಗೂ ರಾಜ್ಯದ ಉಳಿದ ಪಾಲಿಕೆಗಳ ನಡುವೆ 1 ವರ್ಷದ ಆಡಳಿತ ಅವಧಿ ವ್ಯತ್ಯಾಸವಿದೆ. ಹೀಗಾಗಿ ಮಂಗಳೂರು ಪಾಲಿಕೆಗೆ 23ನೇ ಅವಧಿಯ ಮೇಯರ್-ಉಪಮೇಯರ್ ಆಯ್ಕೆ ನಡೆಯಲಿದ್ದರೆ, ಉಳಿದ ಪಾಲಿಕೆಗಳಲ್ಲಿ ಈ ಬಾರಿ 24ನೇ ಅವಧಿ ನಡೆಯುತ್ತಿದೆ. ಕಳೆದ ವರ್ಷವೇ 23ನೇ ಅವಧಿಯ ಮೇಯರ್ -ಉಪಮೇಯರ್ ಮೀಸಲಾತಿ ಮಂಗಳೂರು ಪಾಲಿಕೆಗೆ ಬಂದಿತ್ತು. ಅದು ಈ ವರ್ಷ ಅನುಷ್ಠಾನವಾಗಬೇಕಿತ್ತು. ಈ ನಡುವೆ ಮುಂದಿನ ಸಾಲಿನ ಮೀಸಲಾತಿ ಇಂದು ಪ್ರಕಟವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ದಿವಾಕರ್ ಪಾಂಡೇಶ್ವರ ಮೇಯರ್ ಆಗಿದ್ದರೆ, ಎರಡನೇ ಅವಧಿಗೆ ಸಾಮಾನ್ಯ ಮೀಸಲು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿ ಆಯ್ಕೆಯಾಗಿದ್ದರು. ಕಳೆದ ವರ್ಷ ಸರಕಾರ ಪ್ರಕಟಿಸಿದ್ದ ಮೂರನೇ ಅವಧಿಯ ಮೀಸಲಾತಿಯೂ ‘ಸಾಮಾನ್ಯ’ ಅಭ್ಯರ್ಥಿಗೆ ನಿಗದಿಯಾಗಿತ್ತು.

"ಕಳೆದ ವರ್ಷ 23ನೆ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನದ ಮೀಸಲಾತಿ ರಾಜ್ಯದಿಂದ ಪ್ರಕಟವಾಗಿತ್ತು. ಆದರೆ ಚುನಾವಣೆ ನಡೆದಿರಲಿಲ್ಲ. ಇದೀಗ 24ನೆ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. 23ನೆ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಸಂಬಂಧಿಸಿ ದಿನಾಂಕ ನಿಗದಿಯಾಗಬೇಕಾಗಿದೆ. ಈ ಬಗ್ಗೆ  ಸ್ಪಷ್ಟನೆಯನ್ನು ಕೇಳಲಾಗಿದೆ".

- ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News