ಬಿಜೆಪಿಯಿಂದ ಅಧಿಕಾರಕ್ಕಾಗಿ ಸಾವರ್ಕರ್ ಹೆಸರು ಬಳಕೆ: ಅಖಿಲ ಭಾರತ ಹಿಂದೂ ಮಹಾಸಭಾ ಆರೋಪ
ಮಂಗಳೂರು, ಆ.24: ಜಾತಿಯ ಹೆಸರಿನಲ್ಲಿ ದೇಶವನ್ನು ಸಂಘಟಿಸದ ರಾಜ್ಯ ಬಿಜೆಪಿಗೆ ಸಾವರ್ಕರ್ ಹೆಸರು ಎತ್ತುವ ನೈತಿಕತೆ ಇಲ್ಲ. ಕಾಂಗ್ರೆಸ್‌ಗಿಂತಲೂ ಹೀನಾಯವಾಗಿ ಧರ್ಮವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡಿದ್ದು, ಇದೀಗ ಅಧಿಕಾರದಲ್ಲಿರುವ ಕೊನೆಯ ಪ್ರಯತ್ನವಾಗಿ ಸಾವರ್ಕರ್ ಹೆಸರು ಬಳಸುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಸ್ವಾರ್ಥ ರಾಜಕೀಯ ಮಾಡುವ ಬಿಜೆಪಿ ನಾಯಕರು ಮೊದಲು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಲಿ ನಂತರ ಸಾವರ್ಕರ್ ಬಗ್ಗೆ ಧ್ವನಿ ಎತ್ತಲಿ ಎಂದರು.
ಬಿಜೆಪಿಗೆ ಸಾವರ್ಕರ್ ಕಟ್ಟಿದ ಅಖಿಲ ಭಾರತ ಹಿಂದೂ ಮಹಾಸಭಾ ಬೇಡ, ಅವರ ಸಿದ್ಧಾಂತವಾದ ಅಖಂಡ ಭಾರತದ ಪರಿಕಲ್ಪನೆ ಬೇಡ, ಅವರ ಹಿಂದೂ ರಾಷ್ಟ್ರದ ಭಾರತದ ಸಂವಿಧಾನ ಬೇಡಿ, ಅವರ ಹಿಂದುತ್ವದ ವಿಚಾರಧಾರೆ ಬೇಡ. ಆದರೆ ಮುಂದಿನ ಚುನಾವಣೆಗೆ ಸಾವರ್ಕರ್ ಹೆಸರು ಮತ್ತು ಭಾವಚಿತ್ರ ಬೇಕು. ಇದು ಬಿಜೆಪಿಯ ದಿವಾಳಿತನವನ್ನು ತೋರಿಸುತ್ತದೆ ಎಂದು ಧರ್ಮೇಂದ್ರ ಆರೋಪಿಸಿದರು.
ಸಿದ್ಧರಾಮಯ್ಯ ಏನಾದರೂ ತಿನ್ನಲಿ, ಬಿಜೆಪಿಗೆ ಯಾಕೆ ಆ ವಿಚಾರ. ಬಿಜೆಪಿಯವರು ಯಾರೂ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲವೇ? ಆತ್ಮಸಾಕ್ಷಿ ಇದ್ದಲ್ಲಿ ಅದನ್ನು ಕೇಳಿಕೊಳ್ಳಿ ಎಂದು ಹೇಳಿದ ಧರ್ಮೇಂದ್ರ, ಸಾವರ್ಕರ್‌ರನ್ನು ಬಿಜೆಪಿ ಒಪ್ಪುವುದಾದರೆ ಅವರ ಜನ್ಮ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವ ತಾಕತ್ತು ಇದೆಯೇ ಎಂದು ಸವಾಲೆಸೆದರು.
ಸಾವರ್ಕರ್ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಒಬ್ಬ ಪುಕ್ಕಲ. ಸಾವರ್ಕರ್ ಬಗ್ಗೆ ವಿರೋಧ ವ್ಯಕ್ತಪಡಿಸುವವರು ಸ್ವಾತಂತ್ರ್ಯದಲ್ಲಿ ಎರಡೆರಡು ಕರಿನೀರ ಶಿಕ್ಷೆ ಅನುಭವಿಸಿದ ಒಬ್ಬ ವ್ಯಕ್ತಿಯನ್ನು ತಿಳಿಸಲಿ. ಗಾಂಧೀಜಿ ಹೇಗೆ ಭಾರತ ವಿಭಜನೆಗೆ ಕಾರಣರಾದರೋ ಹಾಗೆಯೇ ಸಿದ್ದರಾಮಯ್ಯನವರು ಮುಸ್ಲಿಂ ಏರಿಯಾ ಹಿಂದೂ ಏರಿಯಾ ಎಂದು ವಿಭಜಿಸುವ ಮೂಲಕ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಲಿದ್ದೇವೆ ಎಂದು ಧರ್ಮೇಂದ್ರ ಹೇಳಿದರು.