×
Ad

ಉಡುಪಿ; ಪಾದಚಾರಿ ಮರಣಕ್ಕೆ ಕಾರಣವಾದ ಬೈಕ್ ಸವಾರನಿಗೆ ಶಿಕ್ಷೆ

Update: 2022-08-24 21:13 IST

ಉಡುಪಿ: ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ರಸ್ತೆ ಬದಿ ನಿಂತಿದ್ದ ಪಾದಚಾರಿಯ ಸಾವಿಗೆ ಕಾರಣವಾದ ಆರೋಪಿಗೆ ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ ತೀರ್ಪು ನೀಡಿದೆ.

2018ರ ಡಿಸೆಂಬರ್ 17ರಂದು ಅಪರಾಹ್ನ 3.50ರ ಸುಮಾರಿಗೆ ಉಪ್ಪೂರು ಮೂಡುಅಮ್ಮುಂಜೆಯ ಆಶಿಶ್ ಶೆಟ್ಟಿ ಎಂಬಾತ ಉಡುಪಿ  ಪುತ್ತೂರು ಗ್ರಾಮದ ಜಂಕ್ಷನ್ ಬಸ್‌ನಿಲ್ದಾಣದ ಬಳಿ ದುಡುಕು, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆ ಯಿಂದ ಬೈಕನ್ನು ಚಲಾಯಿಸಿ, ರಸ್ತೆ ಬದಿ ನಿಂತಿದ್ದ ನಾಗೇಶ್ ಡಿ ಪ್ರಭು ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ, ನಾಗೇಶ್ ಡಿ ಪ್ರಭು ಅವರು ರಸ್ತೆಗೆ ಎಸೆಯಲ್ಪಟ್ಟು, ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರಗಾಯಗೊಂಡು ಮೃತಪಟ್ಟ ಕಾರಣ, ಉಡುಪಿ ಸಂಚಾರ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.    

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್‌ ಅವರು ಆರೋಪಿ ಆಶಿಶ್ ಶೆಟ್ಟಿಗೆ 2 ವರ್ಷ ಕಾರಾಗೃಹ ವಾಸದ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News