ಗಣೇಶೋತ್ಸವ ಹಿನ್ನೆಲೆ: ಬೆಳ್ಳಾರೆ ಠಾಣಾ ವತಿಯಿಂದ ಶಾಂತಿ ಸಭೆ
ಬೆಳ್ಳಾರೆ: ಬೆಳ್ಳಾರೆ ಪೋಲಿಸ್ ಠಾಣಾ ವತಿಯಿಂದ ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಡಿ ವೈ ಎಸ್ಪಿ ಡಾ.ವೀರಯ್ಯ ಹೀರೆಮಠ್ ನೇತೃತ್ವದಲ್ಲಿ ಶಾಂತಿ ಸಭೆ ಗುರುವಾರ ನಡೆಯಿತು. ಗಣೇಶೋತ್ಸವ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಹಾಗೂ ಬೆಳ್ಳಾರೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ನಡೆದ ಬಗ್ಗೆ ಸಾರ್ವಜನಿಕರನ್ನು ಒಟ್ಟುಗೂಡಿಸಿ ಶಾಂತಿ ಸಭೆ ನಡೆಸಲಾಯಿತು.
ಡಿವೈಎಸ್ಪಿ ಡಾ. ವೀರಯ್ಯ ಹೀರೆಮಠ್ ಮಾತನಾಡಿ, ಬೆಳ್ಳಾರೆ ಘಟನೆ ಇಡೀ ದೇಶದಲ್ಲಿ ಸುದ್ದಿ ಮಾಡಿತು. ಮುಂದಿನ ದಿನಗಳಲ್ಲಿ ಇಂತಹ ಘಟನೆಗೆ ಅನುವು ಮಾಡಿ ಕೊಡದೆ ಶಾಂತಿ ಕಾಪಾಡಿಕೊಂಡು ಎಲ್ಲರೂ ಸಹಕರಿಸಿ ಎಂದರು.
ಗಣೇಶೋತ್ಸವ ಸಮೀಪಿಸುತ್ತಿದ್ದು ಕಾನೂನು ಸುವ್ಯವಸ್ಥೆ ಹಾಕಿಕೊಟ್ಟ ಚೌಕಟ್ಟಿನೊಳಗೆ ಹಬ್ಬ ಆಚರಿಸಲು ಇಲಾಖೆಯೊಂದಿಗೆ ಸಹಕರಿಸಿ .ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಿ. ಮೆರವಣಿಗೆಯಲ್ಲಿ ಡಿಜೆಗೆ ಹಾಗೂ ಸಾರ್ವಜನಿಕ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ,ಇಲಾಖೆ ಹೊರಡಿಸಿದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ನಮ್ಮೊಂದಿಗೆ ಸಹಕರಿಸಿ. ಪೋಲಿಸ್ ಇಲಾಖೆ ಸದಾ ನಿಮ್ಮೊಂದಿಗೆ ಇದೆ ಎಂದರು.
ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಮಾತನಾಡಿ ,ಯಾವುದೇ ಸಂಘಟನೆಯಾಗಿರಲಿ ,ಧರ್ಮವಾಗಿರಲಿ ನಾವು ಒಂದುಗೂಡಿಸುವ ಕೆಲಸ ಮಾಡಬೇಕು ಹೊರತು ಶಾಂತಿಕೆಡಿಸುವಂತಹ ಕೆಲಸಕ್ಕೆ ಹೋಗದೆ ಸಮಾಜದಲ್ಲಿ ಶಾಂತಿ ಕಾಪಾಡುವತ್ತ ಎಲ್ಲರೂ ಸಹಕರಿಸಬೇಕು .ಗೌರಿ ಗಣೇಶ ಹಬ್ಬ ಹಾಗೂ ಇತ್ತೀಚೆಗೆ ನಡೆದ ಅಹಿತಕರ ಘಟನೆ ಬಗ್ಗೆ ಈ ಶಾಂತಿ ಸಭೆ ಆಯೋಜನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶರೀಫ್ ಭಾರತ್, ವಿಶ್ವನಾಥ ರೈ ಕಳಂಜ, ಆನಂದ ಬೆಳ್ಳಾರೆ, ಜಯರಾಮ ಉಮಿಕ್ಕಳ, ಸುಬ್ರಾಯ ಗೌಡ ಪಾಲ್ತಾಡಿ, ಗಫೂರ್ ಸಾಹೇಬ್ ಕಲ್ಮಡ್ಕ, ಪ್ರೇಮಚಂದ್ರ ಬೆಳ್ಳಾರೆ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಬೆಳ್ಳಾರೆ ಠಾಣೆಯ ಎಸೈ ಸುಹಾಸ್ , ಕ್ರೈಂ ಎಸೈ ಆನಂದ ಉಪಸ್ಥಿತರಿದ್ದರು. ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪ ಸೇರಿದಂತೆ ಠಾಣಾ ಸಿಬ್ಬಂದಿ ವರ್ಗ ಸಭೆಯಲ್ಲಿ ಸಹಕರಿಸಿದರು.