ಕಣಚೂರು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗಡ್ಡೆ ತೆರವಿನ ಕ್ಲಿಷ್ಟಕರ ಯಶಸ್ವಿ ಚಿಕಿತ್ಸೆ
ಮಂಗಳೂರು, ಆ.26: ಕಣಚೂರು ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ (Kanachur Hospital & Research Centre)ನಲ್ಲಿ 17 ವರ್ಷದ ಬಾಲಕನಲ್ಲಿ ಕಾಣಿಸಿಕೊಂಡ ಅಪರೂಪದ ಕ್ಯಾನ್ಸರ್ ಗೆಡ್ಡೆ ತೆರವಿನ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಚಿಕಿತ್ಸೆಯನ್ನು ಆಸ್ಪತ್ರೆಯ ತಜ್ಞವೈದ್ಯರಾದ ಡಾ.ರವಿವರ್ಮ, ಡಾ.ಗುರುಪ್ರಸಾದ್, ಡಾ.ನಝೀಬ್ ನೇತೃತ್ವದ ತಂಡ ಯಶಸ್ವಿಯಾ ಗಿ ನೆರವೇರಿಸಿದೆ ಎಂದು ಅವರು ತಿಳಿಸಿದರು.
1000 ಹಾಸಿಗೆಗಳುಳ್ಳ ಕಣಚೂರು ಆಸ್ಪತ್ರೆಯಲ್ಲಿ ಈ ರೀತಿಯ ಕ್ಲಿಷ್ಟಕರ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ತಜ್ಞ ವೈದ್ಯರ ತಂಡವಿದೆ. ಕೊಪ್ಪದ 17 ವರ್ಷದ ಬಾಲಕನಿಗೆ ಮೆದುಳು, ಕಣ್ಣು, ಬಾಯಿ, ದವಡೆಯ ಸಂಪರ್ಕ ಭಾಗದಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗೆಡ್ಡೆ ದಿನಕಳೆದಂತೆ ಉಲ್ಬಣಿಸಿತ್ತು. ಹಲವು ಆಸ್ಪತ್ರೆಯ ವೈದ್ಯರು ಕೈಚೆಲ್ಲಿದ ಸಂದರ್ಭದಲ್ಲಿ ಕಣಚೂರು ಆಸ್ಪತ್ರೆಯ ವೈದ್ಯರ ತಂಡ ಈ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ರೋಗಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ ಭರಿಸಲು ಸಾಧ್ಯ ವಾಗದ ಸಂದರ್ಭದಲ್ಲಿ ಈ ಚಿಕಿತ್ಸೆಯ ದುಬಾರಿ ವೆಚ್ಚವನ್ನು ಆಸ್ಪತ್ರೆಯ ಆಡಳಿತವೇ ಭರಿಸಿದೆ ಎಂದವರು ವಿವರಿಸಿದರು.
ಕ್ಲಿಷ್ಟಕರ ಚಿಕಿತ್ಸೆ: ಬಾಲಕನಿಗೆ ಕೋವಿಡ್ ಸಂದರ್ಭದಲ್ಲಿ ರಾಬ್ಡೋಮಿಯಾ ಸಾರ್ಕೋ ಮಾ ಎಂದು ಕರೆಯಲ್ಪಡುವ ಈ ಕ್ಯಾನ್ಸರ್ ರೋಗ ಮುಖದ ದವಡೆಯಲ್ಲಿ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ದಶಲಕ್ಷ ಜನರಲ್ಲಿ ಒಬ್ಬರಲ್ಲಿ ಕಂಡುಬರುವ ಭಾರತದ ಲ್ಲಿ ಶೇ.1ಕ್ಕಿಂತಲೂ ಕಡಿಮೆ ಜನರಲ್ಲಿ ಕಂಡು ಬಂದಿದೆ. ಈ ಕಾಯಿಲೆ ಬಾಲಕನಲ್ಲಿ ಉಲ್ಬಣಿಸಿದ್ದು, ಆತನ ಮುಖ ವಿಕಾರವಾಗಿ ಊದಿಕೊಂಡು ಗೆಡ್ಡೆ ಬೆಳೆಯಲಾರಂಭಿಸಿತ್ತು. ಕಿಮೋಥೆರಪಿ, ರೇಡಿಯೋ ಥೆರಪಿ ಚಿಕಿತ್ಸೆ ವಿಫಲವಾಗಿದ್ದರಿಂದ ಅಂತಿಮವಾಗಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು. ದ್ರವ ಸಾರಜನಕವನ್ನು ಬಳಸಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಕಣ್ಣು, ಮೆದುಳು, ಬಾಯಿ ಸಂಪರ್ಕದ ಭಾಗದಲ್ಲಿ ಕಂಡು ಬಂದ ಈ ಗೆಡ್ಡೆ ಗರಿಷ್ಠ ಮಟ್ಟದಲ್ಲಿ ಬೆಳೆದ ಕಾರಣ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆಯ ಮೂಲಕ ಚಿಕಿತ್ಸೆ ನೀಡುವ ಸವಾಲು ನಮ್ಮ ಮುಂದಿತ್ತು. ಇದೀಗ ರೋಗಿ ಚೇತರಿಸಿಕೊಂಡಿರುವುದಾಗಿ ಡಾ.ರವಿವರ್ಮ ಮತ್ತು ಗುರುಪ್ರಸಾದ್ ವಿವರಿಸಿದರು.
ಆ.3ರಿಂದ ಸೆ.3ರವರೆಗೆ ಉಚಿತ ಒಳರೋಗಿ ಚಿಕಿತ್ಸೆ
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಆ.3ರಿಂದ ಸೆಪ್ಟಂಬರ್ 3ರವರೆಗೆ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವವರಿಗೆ ಒಂದು ತಿಂಗಳ ಉಚಿತ ಚಿಕಿತ್ಸೆಯನ್ನು ಆಸ್ಪತ್ರೆಯ ವತಿಯಿಂದ ನೀಡಲಾಗುವುದು ಎಂದು ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ.ಸಂಭ್ರಮ್, ಡಾ.ಗುರುಪ್ರಸಾದ್, ಡಾ.ರೋಹನ್ ಮೊನೀಸ್, ಡಾ.ನಝೀಬ್, ಡಾ.ವಿನ್ಸೆಂಟ್ ಮಥಾಯಸ್ , ಡಾ.ಹರೀಶ್, ಡಾ.ಮನೀಶ್ ಶೆಟ್ಟಿ, ಡಾ.ಸಂದೀಪ್ ಮೊದಲಾದರು ಉಪಸ್ಥಿತರಿದ್ದರು.