ಭಾರತ-ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಚೀನಾ ತಕರಾರು

Update: 2022-08-26 16:09 GMT

ಬೀಜಿಂಗ್, ಆ.26: ವಿವಾದಿತ ಚೀನಾ-ಭಾರತ ಗಡಿಭಾಗದಲ್ಲಿ ಅಕ್ಟೋಬರ್ನಲ್ಲಿ ನಿಗದಿಯಾಗಿರುವ ಭಾರತ-ಅಮೆರಿಕ ಜಂಟಿ ಸಮರಾಭ್ಯಾಸವು ದ್ವಿಪಕ್ಷೀಯ ಗಡಿ ವಿವಾದದಲ್ಲಿ ಹಸ್ತಕ್ಷೇಪವಾಗಿದ್ದು, ವಾಸ್ತವಿಕ ನಿಯಂತ್ರಣ ರೇಖೆಯ ಬಳಿಕ ಯಾವುದೇ ಮಿಲಿಟರಿ ಸಮರಾಭ್ಯಾಸ ನಡೆಯಬಾರದು ಎಂಬ ಭಾರತ-ಚೀನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಚೀನಾ ಪ್ರತಿಕ್ರಿಯಿಸಿದೆ.

ಚೀನಾ-ಭಾರತ ಗಡಿ ವಿವಾದದಲ್ಲಿ ಯಾವುದೇ ಮೂರನೇ ವ್ಯಕ್ತಿಯ, ಯಾವುದೇ ರೀತಿಯ ಮಧ್ಯಪ್ರವೇಶವನ್ನು ನಾವು ದೃಢವಾಗಿ ವಿರೋಧಿಸುತ್ತೇವೆ ಎಂದು ಚೀನಾದ ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ತಾನ್ ಕೆಫೆಯ್ ಹೇಳಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಗಿಂತ ಸುಮಾರು 100 ಕಿ.ಮೀ ದೂರವಿರುವ ಉತ್ತರಾಖಂಡದ ಅರೂಲಿಯಲ್ಲಿ ಅಕ್ಟೋಬರ್ನಲ್ಲಿ ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ ನಡೆಯಲಿದೆ.

ಇದು ಜಂಟಿ ಯುದ್ಧಾಭ್ಯಾಸದ 18ನೇ ಆವೃತ್ತಿಯಾಗಿದೆ ಎಂದು ವರದಿಯಾಗಿದೆ. ಆದರೆ ಭಾರತದ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. ಸಂಬಂಧಿತ ದೇಶಗಳ ಮಿಲಿಟರಿ ಸಹಕಾರವು (ವಿಶೇಷವಾಗಿ ಸಮರಾಭ್ಯಾಸ ಮತ್ತು ತರಬೇತಿಗೆ ಸಂಬಂಧಿಸಿದಂತೆ) ಯಾವುದೇ ಮೂರನೇ ದೇಶವನ್ನು ಗುರಿಯಾಗಿಸಿಕೊಳ್ಳಬಾರದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಪೂರಕವಾಗಿರಬೇಕು ಎಂದು ಚೀನಾ ಯಾವಾಗಲೂ ಒತ್ತಿಹೇಳುತ್ತದೆ. ಚೀನಾ-ಭಾರತ ಗಡಿ ಸಮಸ್ಯೆ ಎರಡು ದೇಶಗಳ ನಡುವಿನ ವಿಷಯವಾಗಿದೆ.

ಉಭಯ ದೇಶಗಳ ನಡುವೆ ಎಲ್ಲಾ ಹಂತಗಳಲ್ಲೂ ಪರಿಣಾಮಕಾರಿ ಸಂವಹನ ಮುಂದುವರಿದಿದೆ ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಲು ಒಪ್ಪಿಕೊಂಡಿವೆ. ಹೀಗಿರುವಾಗ, ಅಮೆರಿಕ -ಭಾರತ ಜಂಟಿ ಸಮರಾಭ್ಯಾಸವು 1993 ಮತ್ತು 1996ರಲ್ಲಿ ಭಾರತ-ಚೀನಾ ನಡುವೆ ಏರ್ಪಟ್ಟ ಒಪ್ಪಂದವನ್ನು ಉಲ್ಲಂಘಿಸುತ್ತದೆ. ಈ ಒಪ್ಪಂದಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಎರಡೂ ದೇಶಗಳು ಸಮರಾಭ್ಯಾಸ ನಡೆಸಲು ಅವಕಾಶ ನೀಡಲಾಗಿಲ್ಲ ಎಂದು ತಾನ್ ಹೇಳಿದ್ದಾರೆ.

2020ರಲ್ಲಿ ಚೀನಾವು ಲಡಾಖ್ ಪ್ರದೇಶದ ಗಡಿಭಾಗದಲ್ಲಿ ಏಕಪಕ್ಷೀಯವಾಗಿ ಸೇನೆಯನ್ನು ಜಮಾವಣೆಗೊಳಿಸಿ ಈ ಒಪ್ಪಂದವನ್ನು ಉಲ್ಲಂಘಿಸಿದೆ ಎಂಬ ಭಾರತದ ಪ್ರತಿಪಾದನೆಯನ್ನು ನಿರಾಕರಿಸಿದ ಅವರು, ಉಭಯ ದೇಶಗಳ ಮುಖಂಡರ ನಡುವಿನ ಸಹಮತದ ನಿರ್ಧಾರಕ್ಕೆ ಭಾರತ ಬದ್ಧವಾಗಿರಲಿದೆ, ದ್ವಿಪಕ್ಷೀಯ ಮಾರ್ಗದ ಮೂಲಕ ಗಡಿವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವ ಬದ್ಧತೆಯನ್ನು ಎತ್ತಿಹಿಡಿಯಲಿದೆ ಮತ್ತು ಪ್ರಾಯೋಗಿಕ ಕ್ರಮಗಳೊಂದಿಗೆ ಗಡಿಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದಾಗಿ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News