ಚುನಾವಣೆಯಲ್ಲಿ ಉಚಿತ ಕೊಡುಗೆಗಳ ಘೋಷಣೆ ವಿವಾದ: ವಿಚಾರಣೆ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ

Update: 2022-08-26 16:32 GMT

ಪಣಜಿ,ಆ.21: ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ನಿರ್ಬಂಧಗಳನ್ನು ವಿಧಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತ್ರಿಸದಸ್ಯ ನ್ಯಾಯಪೀಠಕ್ಕೆ ಒಪ್ಪಿಸಿದೆ.

ರಾಜಕೀಯ ಪಕ್ಷಗಳು ಕೆಲವು ನಿರ್ದಿಷ್ಟ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಭರವಸೆಯನ್ನು ಕೊಡುವುದಕ್ಕೆ ಅನುಮತಿ ನೀಡಬಾರದೆಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು.

ಕಕ್ಷಿದಾರರು ಪ್ರಸ್ತಾವಿಸಿದ ವಿಷಯಗಳ ಬಗ್ಗೆ ವಿಸ್ತೃತವಾದ ವಿಚಾರಣೆ ನಡೆಸಬೇಕಾದ ಅಗತ್ಯವಿದೆಯೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪ್ರತಿಪಾದಿಸಿದ್ದಾರೆ. ಅರ್ಜಿದಾರರ ವಾದವನ್ನು ವಿರೋಧಿಸಿದ್ದ ದಿಲ್ಲಿಯ ಆಮ್ಆದ್ಮಿ ಪಾರ್ಟಿ ಹಾಗೂ ಡಿಎಂಕೆ ಪಕ್ಷಗಳು, ಜನತೆಯ ಹಿತಕ್ಕಾಗಿ ಘೋಷಿಸುವ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಉಚಿತಕೊಡುಗೆಗಳನ್ನು ಪರಿಗಣಿಸಬಾರದೆಂದು ಪ್ರತಿಪಾದಿಸಿದ್ದವು.

 ಉಚಿತ ಕೊಡುಗೆಗಳ ಯೋಜನೆಗಳು ಭ್ರಷ್ಟಾಚಾರಕ್ಕೆ ಕಾರಣವಾಗುವುದಿಲ್ಲವೆಂದು ಸುಬ್ರಮಣಿಯಮ್ ಬಾಲಾಜಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೆಲವು ಅರ್ಜಿದಾರರು ಕೋರಿರುವುದಾಗಿ ನಿರ್ಗಮನ ಸಿಜೆಐ ಎನ್.ವಿ.ರಮಣ ತಿಳಿಸಿದರು.

ಈ ವಿಷಯದ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು, ವಿಚಾರಣೆಯನ್ನು ತ್ರಿಸದಸ್ಯ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆಯೆಂದು ನ್ಯಾಯಾಲಯ ತಿಳಿಸಿತು. ನ್ಯಾಯಾಲಯದ ವಿಚಾರಣೆಯ ಕಲಾಪಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಜಾಲತಾಣದಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News