ಪ್ರಪಂಚವು ವಿಕಿರಣ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದೆ: ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

Update: 2022-08-26 16:47 GMT

ಕೀವ್, ಆ.೨೬: ಉಕ್ರೇನ್ ನ ಝಪೊರಿಝಿಯಾದಲ್ಲಿರುವ ಯುರೋಪ್ ನ  ಅತೀ ದೊಡ್ಡ ಪರಮಾಣು ವಿದ್ಯುತ್ ಸ್ಥಾವರಕ್ಕೆ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಪ್ರಪಂಚವು ವಿಕಿರಣ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದೆ ಎಂದು ಉಕ್ರೇನ್ನ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. 

ಝಪೊರಿಝಿಯಾ ಅಣುವಿದ್ಯುತ್ ಸ್ಥಾವರ ಪ್ರದೇಶ ಬಿಟ್ಟು ತೆರಳುವಂತೆ ಅಂತರಾಷ್ಟ್ರೀಯ ಸಮುದಾಯವು ರಶ್ಯದ ಮೇಲೆ ಒತ್ತಡ ಹೇರದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ದುರಂತ ಖಂಡಿತಾ ಸಂಭವಿಸಲಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ರಶ್ಯ ಸೇನೆ ನಡೆಸಿದ ಗುಂಡಿನ ದಾಳಿಯಿಂದ ಝಪೊರಿಝಿಯಾ ಸ್ಥಾವರದ ಸಮೀಪದ ಕಲ್ಲಿದ್ದಲು ವಿದ್ಯುತ್ ಕೇಂದ್ರದ ಬೂದಿ ಸಂಗ್ರಹಿಸುವ ಹೊಂಡದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ಝಪೊರಿಝಿಯಾ ಸ್ಥಾವರ ಮತ್ತು ವಿದ್ಯುತ್‌ ಗ್ರಿಡ್‌ ನ ನಡುವಿನ ಸಂಪರ್ಕ ಕಡಿತಗೊಂಡು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ಆದರೆ ಕೆಲ ಗಂಟೆಗಳಲ್ಲೇ ಡೀಸೆಲ್ ಜನರೇಟರ್‌ಗಳ ಮೂಲಕ ಅಣುಸ್ಥಾವರಕ್ಕೆ ವಿದ್ಯುತ್ ಪೂರೈಸಲಾಗಿದೆ.

ರಶ್ಯದ ಸೇನೆಯ ನಿಗಾದಡಿ ಇರುವ ಝಪೊರಿಝಿಯಾ ಸ್ಥಾವರದಲ್ಲಿ ನಮ್ಮ ತಂತ್ರಜ್ಞರು ತೋರಿದ ಸಮಯಸ್ಫೂರ್ತಿಯಿಂದ ಅಣುಸ್ಥಾವರದ ಸುರಕ್ಷೆ ಖಾತರಿಗೊಂಡಿದೆ. ವಿದ್ಯುತ್ ಕಡಿತಗೊಂಡ ಸಂದರ್ಭ ನಮ್ಮ ತಂತ್ರಜ್ಞರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜಗತ್ತು ಮತ್ತೊಂದು ಪರಮಾಣು ವಿಕಿರಣ  ದುರಂತಕ್ಕೆ ಸಾಕ್ಷಿಯಾಗಬೇಕಿತ್ತು ಮತ್ತು ಅದರ ಪರಿಣಾಮ ಎದುರಿಸಬೇಕಿತ್ತು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಸ್ಥಾವರದಿಂದ ಸುಮಾರು ೫೫೬ ಕಿ.ಮೀ ದೂರದಲ್ಲಿರುವ ರಾಜಧಾನಿ ಕೀವ್ನ ಜನರಲ್ಲೂ ಆತಂಕ ಹೆಚ್ಚಿದೆ, ಜತೆಗೆ ಜಗತ್ತಿಗೇ ಆತಂಕ ಎದುರಾಗಿದೆ. ಉಕ್ರೇನ್ ನ ವಿದ್ಯುತ್ ವ್ಯವಸ್ಥೆಯಿಂದ  ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಥಾವರದಲ್ಲಿ ಕಾರ್ಯಾಚರಿಸುತ್ತಿರುವ ಎರಡು ರಿಯಾಕ್ಟರ್ಗಳಿಗೆ ಗ್ರಿಡ್‌ನಿಂದ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಸ್ಥಾವರಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲು ಉಕ್ರೇನ್ ಯೋಧರೇ ಕಾರಣ ಎಂದು ರಶ್ಯ ಆರೋಪಿಸಿದೆ. ಸ್ಥಾವರದ ಸಮೀಪದ ಅರಣ್ಯಪ್ರದೇಶದಲ್ಲಿ ಅಡಗಿಕೊಂಡಿರುವ ಉಕ್ರೇನ್ ಯೋಧರು ಅರಣ್ಯಕ್ಕೆ ಬೆಂಕಿ ಹಚ್ಚಿದ್ದರಿಂದ ವಿದ್ಯುತ್ ಪೂರೈಸುವ ಲೈನ್ ನ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸ್ಥಾವರ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಹಲವು ಗಂಟೆ ವಿದ್ಯುತ್ ಪೂರೈಕೆ ಮೊಟಕುಗೊಂಡಿತ್ತು ಎಂದು ರಶ್ಯದ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, ಝಪೊರಿಝಿಯಾ ಸ್ಥಾವರದ ಪ್ರದೇಶವನ್ನು ಸೇನಾಮುಕ್ತಗೊಳಿಸಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News