×
Ad

ಗುಲಾಂ ನಬಿ ಆಝಾದ್ ಡಿಎನ್‌ಎ ‘ಮೋದಿ-ಫೈಡ್’ಗೊಂಡಿದೆ: ಜೈರಾಮ್ ರಮೇಶ್

Update: 2022-08-26 23:05 IST

ಹೊಸದಿಲ್ಲಿ, ಆ. 26: ರಾಜ್ಯಸಭೆಯ ಮಾಜಿ ಸದಸ್ಯ ಗುಲಾಂ ನಬಿ ಆಝಾದ್ ಅವರು ಕಾಂಗ್ರೆಸ್‌ಗೆ ದ್ರೋಹ ಎಸಗಿದ್ದಾರೆ. ಅವರ ಡಿಎನ್‌ಎ ಮೋದಿ-ಫೈಡ್ (ಮೋದೀಕರಣ)ಗೊಂಡಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಅವರನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಹೇಳಿದ್ದಾರೆ. 

ಆಝಾದ್ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸಂವಹನ ಉಸ್ತುವಾರಿಯ ಕುರಿತ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಹೇಳಿಕೆ ನೀಡಿದ್ದಾರೆ. 

ಕಾಂಗ್ರೆಸ್ ನಾಯಕತ್ವ ಅತ್ಯಧಿಕ ಗೌರವ ನೀಡುತ್ತಿದ್ದ ವ್ಯಕ್ತಿಯೋರ್ವ ವೈಯುಕ್ತಿಕ ದಾಳಿ ನಡೆಸುವ ಮೂಲಕ ದ್ರೋಹ ಎಸಗಿದ್ದಾರೆ. ಇದು ಅವರ ನಿಜವಾದ ವ್ಯಕ್ತಿತವ್ವನ್ನು ಬಹಿರಂಗಗೊಳಿಸಿದೆ ಎಂದು ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ. 
ಆಝಾದ್ ಅವರು ಹಿರಿಯ ನಾಯಕ ಹಾಗೂ ಅವರಿಗೆ ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನೀಡಲಾಗಿತ್ತು ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಉಲ್ಲೇಖಿಸಿದ್ದಾರೆ.

‘‘ಬೆಲೆ ಏರಿಕೆ ಹಾಗೂ ಧ್ರುವೀಕರಣದ ವಿರುದ್ಧ ಬೀದಿಯಲ್ಲಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಅವರು ಪಕ್ಷ ತ್ಯಜಿಸಿದ್ದಾರೆ’’ ಎಂದು ಮಾಕನ್ ಹೇಳಿದ್ದಾರೆ. 

‘‘ಜನರ ಹಾಗೂ ವಿರೋಧ ಪಕ್ಷದ ಧ್ವನಿಗೆ ಅವರು ಬಲ ನೀಡುವರು ಎಂದು ನಾವು ಭಾವಿಸಿದ್ದೆವು. ಆದರೆ, ಈ ಸಂದರ್ಭದಲ್ಲಿ ಪಕ್ಷ ತ್ಯಜಿಸುವ ಅವರ ಆಯ್ಕೆ ತೀವ್ರ ವಿಷಾದಕರ’’ ಎಂದು ಅವರು ತಿಳಿಸಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಹಾಗೂ ಪ್ರಜಾಪ್ರಭುತ್ವಕ್ಕೆ ವಿಷಾದದ ದಿನ ಎಂದು ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್ ಅವರು ಹೇಳಿದ್ದಾರೆ.  

ಸೋನಿಯಾ ಗಾಂಧಿ ಅವರು ಪಕ್ಷದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅವರು ತನ್ನ ಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಚಾರ ಮಾಡಲು ಮಾತ್ರ ಪ್ರಯತ್ನಿಸುತ್ತಿದ್ದಾರೆ ಎಂದು 2015ರಲ್ಲಿ ಬಿಜೆಪಿಗೆ ಸೇರಿದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.  ಆಝಾದ್ ಅವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಸಿಗದೇ ಇರುವುದರಿಂದ ಪಕ್ಷ ತೊರೆದಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ವರಿಷ್ಠ ಫಾರೂಕ್ ಅಬ್ದುಲ್ಲಾ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News