×
Ad

ನಗರ ಪ್ರದೇಶದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ‘ನಮ್ಮ ಕ್ಲಿನಿಕ್’

Update: 2022-08-27 17:39 IST

ಉಡುಪಿ, ಆ.27: ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ, ನಗರ ಮತ್ತು ಪಟ್ಟಣ ಪ್ರದೇಶದ ವಾರ್ಡ್‌ಗಳಲ್ಲಿ ಉತ್ತಮವಾದ ಹಾಗೂ ತ್ವರಿತವಾಗಿ ಆರೋಗ್ಯ ಸೇವೆಗಳನ್ನು ದೊರಕಿಸುವ ಉದ್ದೇಶದಿಂದ ರಾಜ್ಯ ಸರಕಾರ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ ಗಳನ್ನು ತೆರೆಯಲು ಉದ್ದೇಶಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಒಟ್ಟು ಆರು ‘ನಮ್ಮ ಕ್ಲಿನಿಕ್’ಗಳ ಆರಂಭಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ.

ನಗರ ಪ್ರದೇಶಗಳ ಸಾರ್ವಜನಿಕರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶವನ್ನು ಈ ಯೋಜನೆ ಹೊಂದಿದ್ದು,  ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆ ಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತದಿಂದ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ನಮ್ಮ ಕ್ಲಿನಿಕ್ ಹೊಂದಿದೆ.

ನಗರ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಕೇಂದ್ರಿಕರಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳ ಕಣ್ಗಾವಲು ವ್ಯವಸ್ಥೆಯನ್ನು  ಬಲಪಡಿಸುವ ಉದ್ದೇಶವನ್ನು ಸಹ ‘ನಮ್ಮ ಕ್ಲಿನಿಕ್’ ಯೋಜನೆ ಹೊಂದಿದೆ.  

ನಮ್ಮ ಕ್ಲಿನಿಕ್‌ನ ವಿಶೇಷತೆ:  ನಮ್ಮ ಕ್ಲಿನಿಕ್‌ನಲ್ಲಿ ಒಬ್ಬರು ಡಾಕ್ಟರ್, ಒಬ್ಬರು   ನರ್ಸ್, ಒಬ್ಬ ಲ್ಯಾಬ್ ಟೆಕ್ನೀಯನ್ ಮತ್ತು ಒಬ್ಬ ಡಿ ಗ್ರೂಫ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಔಷಧಿಗಳನ್ನು ನೀಡಲಾಗುವುದು, 12 ರೀತಿಯ ವಿವಿಧ ಆರೋಗ್ಯ ಸೇವೆಗಳು ಹಾಗೂ ರಕ್ತ, ಮೂತ್ರ ಪರೀಕ್ಷೆ ಸೇರಿದಂತೆ ಲ್ಯಾಬ್‌ನಲ್ಲಿ 14 ರೀತಿಯ ವಿವಿಧ ಪ್ರಯೋಗಾಲಯ ಸೇವೆಗಳೂ ದೊರೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಈ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸಲಿದ್ದು, ಹೆಚ್ಚಿನ  ಚಿಕಿತ್ಸೆ ಅಗತ್ಯ ಇದ್ದವರಿಗೆ ಇ-ಸಂಜೀವಿನಿ ಮತ್ತು ಟೆಲಿ ಕೌನ್ಸಿಲಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 3, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ  1 ಮತ್ತು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 2 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಈಗಾಗಲೇ ಅನುಮತಿ ದೊರೆತಿದ್ದು, ಈ ಕುರಿತಂತೆ ಈಗಾಗಲೇ ಅಗತ್ಯ ಸಿದ್ಧತೆಗಳು ನಡೆದಿವೆ. ಅಗತ್ಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದೆ.

"ನಮ್ಮ ಕ್ಲಿನಿಕ್ ಆರಂಭದಿಂದ ನಗರ ಪ್ರದೇಶದ ಜನತೆ, ತ್ವರಿತವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆದು ಉತ್ತಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಉಡುಪಿ ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ಸಿಬ್ಬಂದಿಗಳ ನೇಮಕಕ್ಕೆ ಈಗಾಗಲೇ ಸಂದರ್ಶನ ನಡೆಸಲಾಗಿದೆ.  ಜಿಲ್ಲೆ ಯಲ್ಲಿ ಶೀಘ್ರದಲ್ಲೇ  ನಮ್ಮ ಕ್ಲಿನಿಕ್‌ಗಳು ಪ್ರಾರಂಭಗೊಂಡು, ವೈದ್ಯರು ಮತ್ತು ಸಿಬ್ಬಂದಿಗಳು ನಗರ ಪ್ರದೇಶದಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಗೆ ಲಭ್ಯವಾಗಲಿದ್ದಾರೆ".

-ಡಾ.ನಾಗಭೂಷಣ ಉಡುಪ, 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ.

ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್ 

ಒಟ್ಟು 103.73 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 243 ಸೇರಿದಂತೆ ರಾಜ್ಯದ 438 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್’ ಪ್ರಾರಂಭಗೊಳ್ಳಲಿದೆ. ಇದಕ್ಕೆ ಕರ್ನಾಟಕ ಸಚಿವ ಸಂಪುಟ ಈಗಾಗಲೇ ತನ್ನ ಅನುಮೋದನೆಯನ್ನು ನೀಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ನಗರ ಪ್ರದೇಶಗಳಲ್ಲೂ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಿದೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶ ತಂದು ಕೊಡಲಿದೆ ಎಂಬುದು  ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಆಶಾವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News