×
Ad

ಛಾಯಾಗ್ರಹಣ ಎಂಬುದು ಕಲೆ, ಕೌಶಲ್ಯ ಮತ್ತು ವಿಜ್ಞಾನ: ಶಾಂತಕುಮಾರ್

Update: 2022-08-27 21:33 IST

ಮಣಿಪಾಲ: ಛಾಯಾಗ್ರಹಣ (ಪೋಟೊಗ್ರಫಿ) ಎಂಬುದು ಕಲೆ, ಕೌಶಲ್ಯ ಹಾಗೂ ವಿಜ್ಞಾನಗಳ ಸಂಗಮ. ಹೀಗಾಗಿ ಫೋಟೊ ಜರ್ನಲಿಸಂ ಎಂಬುದು ತ್ವರಿತಗತಿಯಲ್ಲಿ ಭಾರೀ ಬದಲಾವಣೆಯನ್ನು ಕಾಣುತ್ತಿದೆ ಎಂದು ಖ್ಯಾತ ಕ್ರೀಡಾ ಛಾಯಾಗ್ರಾಹಕ ಹಾಗೂ ಬೆಂಗಳೂರಿನ ದಿ ಪ್ರಿಂಟರ್ಸ್‌ ಮೈಸೂರು ಪ್ರೈವೆಟ್ ಲಿ.ನ ನಿರ್ದೇಶಕ ಕೆ.ಎನ್. ಶಾಂತಾಕುಮಾರ್ ಹೇಳಿದ್ದಾರೆ.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ)ನಲ್ಲಿ ಶುಕ್ರವಾರ ನಡೆದ ವಿಶ್ವ ಛಾಯಾಚಿತ್ರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಳೆದ 45 ವರ್ಷಗಳಿಂದ ತಮ್ಮ ಪತ್ರಿಕೆಗೆ ಕ್ರೀಡಾ ಛಾಯಾಗ್ರಾಹಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ಶಾಂತಕುಮಾರ್, ಈ ಅವಧಿಯಲ್ಲಿ ಛಾಯಾಗ್ರಹಣದಲ್ಲಾದ ತಾಂತ್ರಿಕ ಬೆಳವಣಿಗೆಯನ್ನು ವಿವರಿಸಿದರು. ಡಿಜಿಟಲ್ ಕ್ರಾಂತಿಯ ಕಾರಣದಿಂದ ಇಂದು ಕೆಟ್ಟ ಚಿತ್ರವನ್ನು ಕ್ಲಿಕ್ಲಿಸುವುದು ತುಂಬಾ ಕಷ್ಟ ಎಂಬಂತಾಗಿದೆ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.

ಡಿಜಿಟಲ್ ಕ್ರಾಂತಿಯ ಕಾರಣದಿಂದ ಇಂದಿನ ಛಾಯಾಗ್ರಾಹಕರಿಗೆ ಹೆಚ್ಚೆಚ್ಚು ಸೃಜನಶೀಲತೆಗೆ ಸ್ವಾತಂತ್ರ್ಯ ದೊರೆಯುವಂತಾಗಿದೆ. ಛಾಯಾಗ್ರಾಹಣ ಎಂಬುದು ಅತ್ಯಂತ ಸರಳವಾಗಿದ್ದು, ಸಾಮಾನ್ಯನೂ ಉತ್ತಮ ಚಿತ್ರವೊಂದನ್ನು ಸೆರೆ ಹಿಡಿಯಲು ಸಾಧ್ಯವಿದೆ ಎಂದು ಶಾಂತಕುಮಾರ್ ನುಡಿದರು.

ಸಮಾರಂಭದಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ಹರ್ಷ ವದ್ಲಮಾನಿ ಹಾಗೂ ಆಸ್ಟ್ರೋಮೋಹನ್ ಉಪಸ್ಥಿತರಿದ್ದು, ಛಾಯಾಗ್ರಾಹಣದ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು.

ಎಂಐಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ಸ್ವಾಗತಿಸಿದರೆ, ಮೀಡಿಯಾ ಸ್ಟಡೀಸ್ ವಿಭಾಗದ ಮುಖ್ಯಸ್ಥೆ ಡಾ.ಶುಭಾ ಎಚ್.ಎಸ್.ವಂದಿಸಿದರು. ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News