ಮಣಿಪಾಲದಲ್ಲಿ ವಿಶ್ವ ಉದ್ಯಮಿಗಳ ದಿನಾಚರಣೆ
ಮಣಿಪಾಲ: ಮಹಿಳೆಯರು ಭಾರತದ ಆರ್ಥಿಕ ಬೆಳವಣಿಗೆ ದಿಕ್ಕನ್ನು ಮರು ವ್ಯಾಖ್ಯಾನಿಸುತಿದ್ದು, ಲಿಂಗ ಸಮಾನತೆ ಯನ್ನು ಸಾಧಿಸುವ ಮೂಲಕ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತದ ಕನಸನ್ನು ತ್ವರಿತವಾಗಿ ಸಾಕಾರ ಗೊಳಿಸಲು ಸಾಧ್ಯವಿದೆ ಎಂದು ಕೊಲೊಸ್ಸಾ ವೆಂಚರ್ಸ್‌ನ ಸ್ಥಾಪಕಿ ಮತ್ತು ಸಿಇಓ ಆಶು ಸುಯಶ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ (ಎಂಇಎಂಜಿ), ಸಿಕ್ಕಿಂ ಮಣಿಪಾಲ ವಿವಿ, ಮಣಿಪಾಲ ವಿವಿ ಜೈಪುರ ಸೇರಿದಂತೆ ಮಣಿಪಾಲ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಉದ್ಯಮಿಗಳ ದಿನದ ಅಂಗವಾಗಿ ಮಣಿಪಾಲದಲ್ಲಿ ನಡೆದ ‘ಮಹಿಳಾ ಉದ್ಯಮಶೀಲತೆ’ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಪ್ರತಿ ವರ್ಷ ಆಗಸ್ಟ್ 21ನ್ನು ಉದ್ಯಮಶೀಲತೆ, ನಾವೀನ್ಯತೆ ಹಾಗೂ ನಾಯಕತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಉದ್ಯಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಿಳೆಯರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಕೊಲೊಸ್ಸಾ ವೆಂಚರ್ಸ್ ನಿಧಿಯೊಂದನ್ನು ಸ್ಥಾಪಿಸಿದೆ.ಈ ನಿಧಿಯನ್ನು ಮಹಿಳಾ ಸ್ಥಾಪಿತ ಕಂಪೆನಿಗಳು ಹಾಗೂ ಮಹಿಳೆಯರು ಪ್ರಮುಖ ಫಲಾನುಭವಿ ಗಳಾದ ಪುರುಷರು ಸ್ಥಾಪಿಸಿದ ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಆಶು ಸುಯಶ್ ವಿವರಿಸಿದರು. ಸಂಸ್ಥೆಯ ಇನ್ನೋರ್ವ ಸ್ಥಾಪಕಿ ಹಾಗೂ ಸಹ ಮುಖ್ಯಸ್ಥೆ ವಂದನಾ ರಾಜ್ಯಾಧ್ಯಕ್ಷ ಉಪಸ್ಥಿತರಿದ್ದರು.
ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಕೊಲೊಸ್ಸಾ ವೆಂಚರ್ಸ್‌ನ ಪ್ರಯತ್ನಗಳನ್ನು ಶ್ಲಾಘಿಸಿದರು. ಮಣಿಪಾಲ ವಿವಿಯಲ್ಲಿರುವ ನಾಲ್ಕು ಇನ್ಯೂಬೇಟರ್‌ಗಳ ಮೂಲಕ ನಾವು ಮಹಿಳೆಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಮಾಡುತಿದ್ದು, 150ಕ್ಕೂ ಅಧಿಕ ಸ್ಟಾರ್ಟಪ್‌ಗಳನ್ನು ಬೆಂಬಲಿಸಿದ್ದೇವೆ ಎಂದರು.
ಮಾಹೆ ಅರೋಗ್ಯವಿಜ್ಞಾನ ವಿಭಾಗದ ಸಹಕುಲಪತಿ ಡಾ. ವೆಂಕಟರಾಯ ಪ್ರಭು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗ್ರೂಫ್‌ನ ಕ್ರಿಯೇಟಿವ್ ಡೈರೆಕ್ಟರ್ ಶ್ರುತಿ ಪೈ, ಹಿರಿಯ ಉಪಾದ್ಯಕ್ಷ ಹರಿನಾರಾಯಣ ಶರ್ಮಾ, ಉಡುಪಿ ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ, ರೋಟರಿಜಿಲ್ಲೆ ೩೧೮೨ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ಮಾಹೆ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ರವಿರಾಜ ಎನ್.ಎಸ್., ಮಣಿಪಾಲ್ ಇನ್‌ಕ್ಯೂಬೇಟರ್‌ನ ಸಿಇಓ ಡಾ.ವೈ. ಶ್ರೀಹರಿ ಉಪಾಧ್ಯಾಯ, ಡಾ.ಮನೀಶ್ ಥಾಮಸ್ ಮುಂತಾದವರು ಉಪಸ್ಥಿತರಿದ್ದರು.