×
Ad

ಇಸ್ರೇಲ್ ಬೆದರಿಕೆಯನ್ನು ಧಿಕ್ಕರಿಸಲು ಫೆಲೆಸ್ತೀನ್ ಸಂಸ್ಥೆಗಳ ನಿರ್ಧಾರ

Update: 2022-08-27 22:43 IST

ರಮಲ್ಲಾ, ಆ.27: ಆಗಸ್ಟ್ 18 ರಂದು ಇಸ್ರೇಲ್ ಸೇನೆಯ ನಿರ್ಧಾರದಿಂದ ಮುಚ್ಚಲ್ಪಟ್ಟಿರುವ ಫೆಲೆಸ್ತೀನ್ನ 7 ನಾಗರಿಕ ಹಕ್ಕುಗಳ ಸಂಸ್ಥೆಗಳ ನಿರ್ದೇಶಕರು  ತಮ್ಮ ಕಚೇರಿಯನ್ನು ಪುನಃ ತೆರೆಯಲು ಮತ್ತು ಎಂದಿನಂತೆ ತಮ್ಮ ಚಟುವಟಿಕೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. 

ನಾವು ನಮ್ಮ ಕಚೇರಿಗಳಿಂದ ಕೆಲಸ ಮುಂದುವರಿಸಲು ನಿರ್ಧರಿಸಿದ್ದೇವೆ. ಇದು ನಮ್ಮ ಧೈರ್ಯವನ್ನು ಪ್ರದರ್ಶಿಸುವ ಅಥವಾ ಹಕ್ಕು ಸಾಧಿಸುವ ಪ್ರಕ್ರಿಯೆಯಲ್ಲ. ಆದರೆ ನಾವು ಮಾನವ ಹಕ್ಕುಗಳನ್ನು ರಕ್ಷಿಸುತ್ತಿದ್ದೇವೆ ಎಂಬ ವಿಶ್ವಾಸದ ದ್ಯೋತಕವಾಗಿ   ಮತ್ತು ತನಗಿಷ್ಟ ಬಂದಹಾಗೆ ರೂಪಿಸಿದ ತನ್ನ ಕಾನೂನುಗಳನ್ನು ನಮ್ಮ ಮೇಲೆ ಹೇರುವ ದುರಹಂಕಾರಿ ಆಕ್ರಮಣಕಾರನಿಗೆ ಪ್ರತಿಕ್ರಿಯಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೆಲೆಸ್ತೀನ್ ನ ಪ್ರಮುಖ ಮಾನವ ಹಕ್ಕು ಸಂಘಟನೆ `ಅಲ್-ಹಖ್'ನ ನಿರ್ದೇಶಕ ಷವಾನ್ ಜಬ್ರಿಯಾನ್ರನ್ನು ಉಲ್ಲೇಖಿಸಿ ಅರಬ್ ನ್ಯೂಸ್ ವರದಿ ಮಾಡಿದೆ. 

ಅಲ್-ಹಖ್ ಸಂಘಟನೆ ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಇಸ್ರೇಲ್ ಅರೋಪಿಸಿದೆ.  ಇಸ್ರೇಲ್ ತನಗೆ ಅನುಕೂಲವಾಗುವಂತೆ ಕಾನೂನುಗಳನ್ನು ರೂಪಿಸುತ್ತಿದೆ. ಈ ನಿರ್ಧಾರದ ವಿರುದ್ಧ ಪೆಲೆಸ್ತೀನ್ ಅಥಾರಿಟಿ(ಪಿಎ) ರಾಜಕೀಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ ಜಬ್ರಿಯಾನ್, ಫೆಲೆಸ್ತೀನ್ನ ಮಾನವ ಹಕ್ಕು ಸಂಘಟನೆಗಳ ಜತೆ ಸಕಾರಾತ್ಮಕ ಜಾಗತಿಕ ಒಗ್ಗಟ್ಟು ಪ್ರದರ್ಶನ ಶ್ಲಾಘನೀಯ,  ಆದರೆ ಇದು ಇಸ್ರೇಲ್ನ ನಿರ್ಧಾರ ಬದಲಿಸಲು ಸಾಕಾಗಲಿಲ್ಲ. ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ ಎಂಬುದು ನಮಗೆ ತಿಳಿದಿದೆ. ಇಸ್ರೇಲ್ ನ ಯುದ್ಧಾಪರಾಧದ ದಾಖಲೆಗಳನ್ನು ಐಸಿಸಿಗೆ ಹಸ್ತಾಂತರಿಸಲಿದ್ದೇವೆ. ಇಸ್ರೇಲ್ ವಿರುದ್ಧ ಆರ್ಥಿಕ, ರಾಜಕೀಯ ಮತ್ತು ರಾಜತಾಂತ್ರಿಕ ನಿರ್ಬಂಧ ಜಾರಿಗೊಳಿಸುವುದು ಸೇರಿದಂತೆ ಗಂಭೀರ ನಿಲುವನ್ನು ಯುರೋಪಿಯನ್ ಯೂನಿಯನ್ ತಳೆಯಬೇಕು ಎಂದರು.

1972ರಲ್ಲಿ ಮ್ಯೂನಿಕ್ ಒಲಿಂಪಿಕ್ಸ್ನಲ್ಲಿ ನಡೆದ ಇಸ್ರೇಲಿಯನ್ನರ ಹತ್ಯಾಕಾಂಡಕ್ಕೆ ಹೋಲಿಸಿದರೆ ಇಸ್ರೇಲಿಯನ್ನರು 1947ರಿಂದ ಇದುವರೆಗೆ ಈ ರೀತಿಯ 50 ಹತ್ಯಾಕಾಂಡವನ್ನು ಪೆಲೆಸ್ತೀನ್ನಲ್ಲಿ ನಡೆಸಿದ್ದಾರೆ ಎಂದು ಬರ್ಲಿನ್ನಲ್ಲಿ ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡ ಇಸ್ರೇಲ್, ಪೆಲೆಸ್ತೀನ್ ಮಾನವ ಹಕ್ಕು ಸಂಘಟನೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಅಬ್ಬಾಸ್ ಹೇಳಿಕೆಯಿಂದ  ಈಗಿನ ಸಂದರ್ಭದಲ್ಲಿ ಪೆಲೆಸ್ತೀನ್ ಸಂಘಟನೆಯನ್ನು ಸಮರ್ಥಿಸಿಕೊಳ್ಳಲು ಯುರೋಪಿಯನ್ ಯೂನಿಯನ್ ಹಿಂಜರಿಯುತ್ತಿದೆ ಎಂದು ಷವಾನ್ ಜಬ್ರಿಯಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News