ಸುಡಾನ್ ಗಡಿ ಬಳಿಯ ಮರುಭೂಮಿಯಲ್ಲಿ 15 ವಲಸಿಗರ ಮೃತದೇಹ ಪತ್ತೆ
Update: 2022-08-27 22:47 IST
ಕೈರೋ, ಆ.27: ಸುಡಾನ್ನ ಗಡಿಭಾಗಕ್ಕೆ ಹೊಂದಿಕೊಂಡಿರುವ ಮರುಭೂಮಿಯಲ್ಲಿ ಕನಿಷ್ಟ 15 ವಲಸಿಗರ ಮೃತದೇಹ ಪತ್ತೆಯಾಗಿದೆ ಎಂದು ಲಿಬಿಯಾದ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಸಂಘರ್ಷ ಪೀಡಿತ ಸುಡಾನ್ನಿಂದ ಲಿಬಿಯಾದ ಮೂಲಕ ಯುರೋಪ್ಗೆ ತೆರಳಲು ವಲಸಿಗರು ಉದ್ದೇಶಿಸಿದ್ದರು. ಅರ್ಧದಾರಿಯಲ್ಲಿ ಅವರು ಸಂಚರಿಸುತ್ತಿದ್ದ ವಾಹನ ಕೆಟ್ಟು ನಿಂತಿದೆ. ಬಳಿಕ ಕಾಲ್ನಡಿಗೆಯಲ್ಲಿ ಸಾಗಿದ ಅವರು ಅಸ್ವಸ್ಥರಾಗಿದ್ದಾರೆ. ೧೫ ವಲಸಿಗರು ಮೃತಪಟ್ಟರೆ, ಇತರ 9 ವಲಸಿಗರು ಬದುಕುಳಿದಿದ್ದಾರೆ. 2 ಮಂದಿ ನಾಪತ್ತೆಯಾಗಿದ್ದಾರೆ. ವಲಸಿಗರ ಬಳಿ ಆಹಾರ ಮತ್ತು ನೀರು ಇಲ್ಲದ ಕಾರಣ ಈ ದುರಂತ ಸಂಭವಿಸಿದೆ ಎಂದು ಅಕ್ರಮ ವಲಸೆ ನಿಗ್ರಹ ಇಲಾಖೆ ಹೇಳಿದೆ.
ಮರುಭೂಮಿಯಲ್ಲಿ ವಲಸಿಗರು ಮೃತಪಟ್ಟಿರುವ ವೀಡಿಯೊವನ್ನು ಇಲಾಖೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ.