ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಜೈಲು ಶಿಕ್ಷೆ ರದ್ದತಿಗೆ ಸುಪ್ರೀಂಕೋರ್ಟ್ ಗೆ 134 ಮಾಜಿ ಉನ್ನತ ಅಧಿಕಾರಿಗಳ ಪತ್ರ
ಹೊಸದಿಲ್ಲಿ,ಆ.27: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲಾ 11 ಮಂದಿಯನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ‘ಘೋರ ಹಾಗೂ ಪ್ರಮಾದಕರ’ ನಿರ್ಧಾರವನ್ನು ರದ್ದುಪಡಿಸಬೇಕೆಂದು, 134 ಮಂದಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಸುಪ್ರೀಂಕೋರ್ಟ್ಗೆ ಆಗ್ರಹಿಸಿದ್ದಾರೆ.
‘ಸಾಂವಿಧಾನಿಕ ನಡವಳಿಕೆ ಸಮಿತಿ’ ಎಂಬ ಸಂಘಟನೆಯು ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಬರೆದ ಈ ಪತ್ರಕ್ಕೆ ಸಹಿಹಾಕಿದವರಲ್ಲಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳಾದ ನಜೀಬ್ ಜಂಗ್, ವಜಾಹತ್ ಹಬೀಬುಲ್ಲಾ, ಹರ್ಷ ಮಂಧೇರ್,ಜೂಲಿಯೊ ರಿಬೇರೋ, ಅರುಣಾ ರಾಯ್, ಜಿ.ಬಾಲಚಂದ್ರನ್, ರಾಶೆಲ್ ಚಟರ್ಜಿ, ನಿತಿನ್ ದೇಸಾಯಿ, ಎಚ್.ಎಸ್.ಗುಜ್ರಾಲ್ ಹಾಗೂ ಮೀನಾ ಗುಪ್ತಾ ಅವರು ಕೂಡಾ ಒಳಗೊಂಡಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ಕ್ರಮದಿಂದ ತಾವು ಗಾಢವಾಗಿ ನೊಂದಿದ್ದೇವೆ ಎಂದು ಈ ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ.
‘ನಿಮಗೆ ತಿಳಿದಂತೆ ಬಿಲ್ಕಿಸ್ ಬಾನು ಅವರ ಕಥೆಯು ಅಗಾಧವಾದ ಧೈರ್ಯ ಹಾಗೂ ಛಲದ ಕಥೆಯಾಗಿದೆ. ಇದೊಂದು ಜರ್ಝರಿತ ಹಾಗೂ ಘಾಸಿಗೊಂಡ ಯುವತಿಯೊಬ್ಬಳು ನ್ಯಾಯಾಲಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದ ದಿಟ್ಟತನದ ಅದ್ಭುತ ಗಾಥೆಯಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
ಆರೋಪಿಗಳು ಪ್ರಭಾವಿಗಳಾಗಿದ್ದರಿಂದ ನ್ಯಾಯಸಮ್ಮತ ವಿಚಾರಣೆಗಾಗಿ ಈ ಪ್ರಕರಣವನ್ನು ಗುಜರಾತ್ನಿಂದ ಮುಂಬೈನ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಅಲ್ಲದೆ ಇದೊಂದು ಅತ್ಯಂತ ಅಪರೂಪದ ಪ್ರಕರಣ ಕೂಡಾ ಆಗಿತ್ತು. ಆರೋಪಿಗಳನ್ನು ರಕ್ಷಿಸಲು ಹಾಗೂ ಅಪರಾಧವನ್ನು ಮುಚ್ಚಿಹಾಕಲು ಪೊಲೀಸರು ಹಾಗೂ ವೈದ್ಯರು ಕೂಡಾ ಸಾಕ್ಷಗಳನ್ನು ತಿರುಚಲು ಯತ್ನಿಸಿದ್ದರು ಎಂದು ಪತ್ರದಲ್ಲಿ ನೆನಪಿಸಲಾಗಿದೆ.
ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ವಿಚಾರಣೆಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದರಿಂದ ಜೈಲು ಶಿಕ್ಷೆ ರದ್ದತಿ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆ ರಾಜ್ಯವು ಆಲಿಸಬೇಕಿತ್ತೆಂದು ಸಮಿತಿಯು 2015ರ ಸಾಂವಿಧಾನಿಕ ಪೀಠವೊಂದರ ತೀರ್ಪನ್ನು ಉಲ್ಲೇಖಿಸಿ ಹೇಳಿದೆ.
ಬಿಲ್ಕಿಸ್ ಬಾನು ಪ್ರಕರಣದ ಆಪರಾಧಿಗಳ ಜೈಲು ಶಿಕ್ಷೆ ರದ್ದುಪಡಿಸುವ ಕುರಿತು ಎರಡು ತಿಂಗಳುಗಳ ಅಲ್ಪಾವಧಿಯೊಳಗೆ ನಿರ್ಧಾರವನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಯಾಕೆ ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡಿತ್ತೆಂದು ಸಮಿತಿಯು ಪ್ರಶ್ನಿಸಿದೆ.