ಪರೀಕ್ಷಾ ಕೇಂದ್ರದಲ್ಲಿ ಒಳ ಉಡುಪು ತೆಗೆಸಿದ ಪ್ರಕರಣ: ಮತ್ತೆ ನೀಟ್ ಪರೀಕ್ಷೆ ಬರೆಯಲು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ
Update: 2022-08-27 23:00 IST
ಕೊಲ್ಲಂ, ಆ. 27: ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯುವ ಮುನ್ನ ಒಳ ಉಡುಪು ತೆಗೆಯುವಂತೆ ಸೂಚಿಸಲಾಗಿದೆ ಎಂದು ಹೇಳಲಾದ ಮಹಿಳಾ ಅಭ್ಯರ್ಥಿಗಳಿಗೆ ನೀಟ್ ಪರೀಕ್ಷೆಯನ್ನು ಮರು ಆಯೋಜಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ. ಈ ಮಹಿಳಾ ಅಭ್ಯರ್ಥಿಗಳಿಗೆ ಸೆಪ್ಟಂಬರ್ 4ರಂದು ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ. ಈ ಬಗ್ಗೆ ಇ ಮೇಲ್ ಕಳುಹಿಸಲಾಗಿದೆ ಎಂದು ಅದು ತಿಳಿಸಿದೆ.
ಕೇರಳದ ಕೊಲ್ಲಂ ಜಿಲ್ಲೆಯ ನೀಟ್ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಒಳ ಉಡುಪು ತೆಗೆದು ಪ್ರವೇಶಿಸುವಂತೆ ಮಹಿಳಾ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿತ್ತು.
ವ್ಯಕ್ತಿಯೋರ್ವ ಜುಲೈಯಲ್ಲಿ ಕೊಟ್ಟಾರಕ್ಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನ್ನ ಪುತ್ರಿ ಸೇರಿದಂತೆ ಮಹಿಳಾ ನೀಟ್ ಅಭ್ಯರ್ಥಿಗಳಲ್ಲಿ ಚಾತಮಂಗಳಂ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಬ್ರಾ ತೆಗೆಯುವಂತೆ ಸೂಚಿಸಲಾಗಿದೆ ಎಂದು ದೂರಿದ್ದರು.